ADVERTISEMENT

ಗ್ರಾಮ ಪಂಚಾಯಿತಿ ಸಭೆಯಲ್ಲಿ ಬಹುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 9:40 IST
Last Updated 21 ಫೆಬ್ರುವರಿ 2012, 9:40 IST

ಕೊಕ್ಕಡ (ಉಪ್ಪಿನಂಗಡಿ): ಕೊಕ್ಕಡ ಪೇಟೆ ರಸ್ತೆ ವಿಸ್ತರಣೆ ವಿವಾದ ಕುರಿತಂತೆ ಶುಕ್ರವಾರ ಕೊಕ್ಕಡ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಗಲೀಕರಣ ಪರವಾಗಿ ಬಹುಮತದೊಂದಿಗೆ ನಿರ್ಣಯ ಕೈಗೊಳ್ಳಲಾಯಿತು.

ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ಈಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದು ಕೊಕ್ಕಡ ಪೇಟೆಯಲ್ಲಿ 75ಕ್ಕೂ ಮಿಕ್ಕಿ ಅಂಗಡಿಗಳಿದ್ದು ಇವು ಸುಮಾರು 150 ವರ್ಷ ಹಳೆಯ ಕಟ್ಟಡಗಳು. ವಿಸ್ತರಣೆ ಮಾಡಿದರೆ ಕಟ್ಟಡ ಕುಸಿದು ಬಿದ್ದು ಬಹಳಷ್ಟು ಜನರಿಗೆ ತೊಂದರೆಯಾಗಲಿದೆ, ಆದ್ದರಿಂದ ಈ ರಸ್ತೆಯ ಅಗಲೀಕರಣಕ್ಕೆ ತಡೆಯಾಜ್ಞೆ ನೀಡಬೇಕು ಎಂದಿದ್ದರು.

ಮುಖ್ಯಮಂತ್ರಿ ಅವರ ಆದೇಶದಂತೆ ದ.ಕ. ಜಿಲ್ಲಾಧಿಕಾರಿಯವರು ಕೊಕ್ಕಡ ಗ್ರಾ.ಪಂ. ಈ ಕುರಿತಂತೆ ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮದಂತೆ ನಿರ್ಣಯ ಕೈಗೊಂಡು ಮುಖ್ಯಮಂತ್ರಿ, ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ  ವರದಿ ಸಲ್ಲಿಸುವಂತೆ ಆದೇಶಿಸಿದ್ದರು.

 ಈ ಹಿನ್ನೆಲೆಯಲ್ಲಿ ಗ್ರಾ.ಪಂ.ವಿಶೇಷ ಸಭೆ ಕರೆದು ಚರ್ಚೆ ನಡೆದು ಪೇಟೆಯ ರಸ್ತೆ ತೀರಾ ಅಗಲ ಕಿರಿದಾಗಿದ್ದು, ಬಸ್ಸು ಹಾಗೂ ಇನ್ನಿತರ ವಾಹನಗಳು ಸಂಚರಿಸುವಾಗ ರಸ್ತೆಯಲ್ಲಿ ತಡೆ ಉಂಟಾಗುತ್ತಿದೆ.

ರಸ್ತೆಯ ಪಕ್ಕದ ಜಮೀನು ವೈದ್ಯ ನಾಥೇಶ್ವರ ದೇವಳದ ಪಟ್ಟಾ ಸ್ಥಳವಾಗಿ ರುವುದರಿಂದ ದೇವಳದ ವತಿಯಿಂ ದಲೇ ಮುಂದಕ್ಕೆ ಹೊಸ ಕಟ್ಟಡ ನಿರ್ಮಿಸಿ ಆಸಕ್ತ ಬಾಡಿಗೆದಾರರಿಗೆ ನೀಡುವ ಕುರಿತು ನಿರ್ಣಯ ಅಂಗೀಕಾರವಾಗಿರುತ್ತದೆ.

ಆದ ಕಾರಣ ರಸ್ತೆ ಅಗಲೀಕರಣ ಆಗಬೇಕಾದುದು ಅಗತ್ಯ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಈ ಕುರಿತಂತೆ ನಿರ್ಣಯವನ್ನೂ ಕೈಗೊಳ್ಳ ಲಾಯಿತು. ಸಭೆಯಲ್ಲಿದ್ದ ಒಟ್ಟು 11ಸದಸ್ಯರ ಪೈಕಿ 6 ಮಂದಿ ನಿರ್ಣಯ ಪರವಾಗಿದ್ದರೆ, 5 ಮಂದಿ ವಿರೋಧ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.