ADVERTISEMENT

ಟ್ಯಾಬ್‌ನಿಂದ ಚಿಣ್ಣರಿಗೆ ಅಕ್ಷರಾಭ್ಯಾಸ

ಬಳ್ಳಕದಲ್ಲಿ ಮಾದರಿ ಅಂಗನವಾಡಿ ಕೇಂದ್ರ: ಹೈಟೆಕ್‌ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 11:01 IST
Last Updated 5 ಏಪ್ರಿಲ್ 2018, 11:01 IST
ಗಮನ ಸೆಳೆಯುತ್ತಿರುವ ಬಳ್ಳಕ ಅಂಗನವಾಡಿ ಕೇಂದ್ರ
ಗಮನ ಸೆಳೆಯುತ್ತಿರುವ ಬಳ್ಳಕ ಅಂಗನವಾಡಿ ಕೇಂದ್ರ   

ಸುಬ್ರಹ್ಮಣ್ಯ: ಮಕ್ಕಳು ಮನೆಯಿಂದ ಅಂಗನವಾಡಿಗೆ ಬರಲು ಹಠ ಹಿಡಿಯುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಮಕ್ಕಳು ತಮ್ಮನ್ನು ಮನೆಗೆ ಕರೆದೊಯ್ಯದಂತೆ ಪೋಷಕರಲ್ಲಿ ಹಠಕ್ಕೆ ಬೀಳುತ್ತಾರೆ. ಇದಕ್ಕೆ ಕಾರಣ ಈ ಅಂಗನವಾಡಿ ಕೇಂದ್ರದಲ್ಲಿ ಇರುವ ಮೂಲ ಸೌಕರ್ಯಗಳು. ಆಧುನಿಕ ಶೈಲಿಯಲ್ಲಿ ಶಿಕ್ಷಣ ನೀಡುತ್ತಿರುವ ಈ ಕೇಂದ್ರ ಇದೀಗ ಮಾದರಿಯಾಗಿ ಗಮನ ಸೆಳೆಯುತ್ತಿದೆ. ಸುಳ್ಯ ತಾಲ್ಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕದಲ್ಲಿ ಅಂಗನವಾಡಿ ಕೇಂದ್ರವಿದೆ. ಪಂಜ-ಗುತ್ತಿಗಾರು ರಸ್ತೆಯ ಒಳಗಿನ ಕಾಡಿನ ಮಧ್ಯೆ ಜನವಸತಿ ವಿರಳವಿರುವಲ್ಲಿ ನಡೆಯುತ್ತಿರುವ ಈ ಅಂಗನವಾಡಿಯ ಮೂಲ ಸೌಕರ್ಯಗಳನ್ನು ಕಂಡಾಗ ಅಚ್ಚರಿ ಎನಿಸುತ್ತಿದೆ. ನಗರ ಸಹಿತ ಎಲ್‌ಕೆಜಿ, ಯುಕೆಜಿ ಶಾಲೆಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ವ್ಯವಸ್ಥೆಗಳು ಇಲ್ಲಿವೆ.

ಇಲ್ಲಿ ಈ ಹಿಂದೆ ಸರ್ಕಾರಿ ಶಾಲೆ ಕಟ್ಟಡದ ಜತೆ ಅಂಗನವಾಡಿ ಕೇಂದ್ರ ಇತ್ತು. ಬಳಿಕ ಸರ್ಕಾರದ ಅನುದಾನದ ಜತೆಗೆ ಊರಿನ ದಾನಿಗಳು, ಪೋಷಕರು ಮತ್ತು ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ₹14 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿದ್ದಾರೆ.ಗೋಡೆಯಲ್ಲಿ ಕಲಿಕೆಗೆ ಸಹಕಾರಿಯಾಗುವ ಕಲಾತ್ಮಕ ಕೃತಿಗಳನ್ನು ರಚಿಸಲಾಗಿದೆ. ತರಕಾರಿ ತೋಟ, ಸಾವಯವ ಹಣ್ಣು ಹಂಪಲು, ಗಿಡಮರಗಳ ಚಿತ್ರ ಸಹಿತ ಪಟ್ಟಿ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ಹಬ್ಬಗಳು, ಪೂಜಾ ಸಾಮಗ್ರಿಗಳು, ನಾದ ಸ್ವರಗಳು, ಪ್ರಸಿದ್ಧ ಆಟಗಳು, ಸಂಪರ್ಕ ಸಾಧನಗಳು, ಮನರಂಜನಾ ವಿಧಾನ, ವಾಹನಗಳು, ಅವುಗಳ ಹೆಸರು ಮತ್ತು ಚಿತ್ರಗಳನ್ನು ಗೋಡೆಗಳಲ್ಲಿ ಅಂದವಾಗಿ ರಚಿಸಲಾಗಿದೆ. ವ್ಯಾಯಾಮದ ಭಂಗಿಗಳು, ಯೋಗ, ಧ್ಯಾನ ಇತ್ಯಾದಿಗಳ ಆಕೃತಿಗಳನ್ನು ರಚಿಸಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಪ್ರಯತ್ನ ಇಲ್ಲಿ ನಡೆದಿದೆ.

ಶಾಲಾ ಆವರಣದಲ್ಲಿ ಸುಂದರ ಹೂತೋಟ ನಿರ್ಮಿಸಲಾಗಿದೆ. ವಿವಿಧ ಬಣ್ಣದ ಹೂವಿನ ಗಿಡ ಹಾಗೂ ಬಾಳೆಗಿಡಗಳನ್ನು ನೆಡಲಾಗಿದೆ.ತೆಂಗಿನ ಸಸಿ, ಮಾವು ಚಿಕ್ಕು, ನಿಂಬೆಹಣ್ಣು, ಸೀಬೆ, ಪಪ್ಪಾಯಿ, ನೆಲ್ಲಿ ಜತೆ ಔಷಧೀಯ ಗಿಡಗಳನ್ನು ಆವರಣದಲ್ಲಿ ಬೆಳೆಸಲಾಗಿದೆ.ಅಂಗನವಾಡಿ ಕೇಂದ್ರದಲ್ಲಿ ಎರಡು ಪ್ರತ್ಯೇಕ ಶೌಚಾಲಯ ಹೊಂದಲಾಗಿದೆ. ಕೇಂದ್ರ ಹಾಗೂ ಮಕ್ಕಳ ಸ್ವಚ್ಛತೆಗೂ ಗಮನ ಹರಿಸಲಾಗಿದೆ. ಮಕ್ಕಳಿಗೆ ಎಳವೆಯಲ್ಲಿ ಸ್ವಚ್ಛತೆಯ ಪಾಠದ ಜತೆಗೆ ಎಲ್ಲ ಮಕ್ಕಳು ಸಮವಸ್ತ್ರ ಹೊಂದಿದ್ದು, 1 ವರ್ಷದಿಂದ ಇಲ್ಲಿ ಸಮವಸ್ತ್ರ ಜಾರಿಯಲ್ಲಿದೆ. ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ADVERTISEMENT

ಟ್ಯಾಬ್ ಮೂಲಕ ಶಿಕ್ಷಣ: ಸಾಮಾನ್ಯ ಸಿರಿವಂತರಿರುವ ಇಲ್ಲಿ ಪೋಷಕರೇ ಕಟ್ಟಡ ನಿರ್ಮಿಸುವಾಗ ಮಣ್ಣು ಹೊತ್ತು ಕಟ್ಟಡ ನಿರ್ಮಿಸಲೂ ನೆರವಾಗಿದ್ದಾರೆ. ಈಗಲೂ ಶಾಲೆಗೆ ಬಂದಲ್ಲಿ ಸ್ವ ಇಚ್ಛೆಯಿಂದ ಪಾತ್ರೆ ಹಾಗೂ ಇತರೆ ಸ್ವಚ್ಛತೆಗೆ ಮುಂದಾಗುತ್ತಾರೆ. ಇದರ ಜತೆಗೆ ಆಧುನಿಕ ವ್ಯವಸ್ಥೆ ಟ್ಯಾಬ್ ಮೂಲಕ ಚಿಣ್ಣರಿಗೆ ಶಿಕ್ಷಣ ನೀಡುವ ಈ ಕೇಂದ್ರ, ಮಾದರಿ ಕೇಂದ್ರವೆಂದು ಗುರುತಿಸಿಕೊಂಡಿದೆ.

ಏನೆಲ್ಲ ಇದೆ

ನೆಲಕ್ಕೆ ಟೈಲ್ಸ್ ಹಾಸಿದ ಕೇಂದ್ರದಲ್ಲಿ 14 ಮಂದಿ ಹೆಣ್ಣು ಮಕ್ಕಳು, ಆರು ಮಂದಿ ಗಂಡು ಮಕ್ಕಳ ಸಹಿತ 22 ಮಕ್ಕಳಿದ್ದಾರೆ. ಸಿಸಿಟಿವಿ ಕ್ಯಾಮೆರಾ, ಹವಾನಿಯಂತ್ರಕ, ವಿದ್ಯುತ್ ಪಂಪ್, ನೀರಿನ ಟ್ಯಾಂಕ್, ಪಾತ್ರೆ, ಕಪಾಟು, ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡಿ, ಆಟಿಕೆಗಳು, ಪಾತ್ರೆಗಳು, ಗಡಿಯಾರ, ಮಣ್ಣಿನ ಮಡಿಕೆ, ಪ್ರಾಜೆಕ್ಟರ್, ಮರದ ಮೇಜು-ಕುರ್ಚಿ, ಎಲ್ಲ ಮಕ್ಕಳಿಗೂ ಬೇಬಿ ಚೇರ್, ಪೋಷಕರಿಗೆ ಚೇರ್, ಅಕ್ವೇರಿಯಂ, ಸೋಲಾರ್ ವಿದ್ಯುತ್, ಅರೆಯುವ ಕಲ್ಲು, ಮಿಕ್ಸರ್ ಗ್ರೈಂಡರ್, ಫ್ಯಾನ್‌, ತಟ್ಟೆಗಳು, ಸಿಹಿ ತಿಂಡಿ, ಕಂಚಿನ ದೀಪ, ಹೀಗೆ ಅಡುಗೆ, ಆಟ–ಪಾಠಗಳಿಗೆ ಯಾವ ಕೊರತೆಯೂ ಇಲ್ಲದಂತೆ ಎಲ್ಲ ಸ್ವತ್ತುಗಳು ಇಲ್ಲಿವೆ. ಇವೆಲ್ಲವನ್ನು ಮಕ್ಕಳ ಪೋಷಕರು, ಊರಿನ ದಾನಿಗಳು, ಸಂಘ–ಸಂಸ್ಥೆಗಳು ದಾನ ರೂಪದಲ್ಲಿ ನೀಡಿದ್ದಾರೆ. ಸುಮಾರು ₹4 ಲಕ್ಷಕ್ಕಿಂತಲೂ ಅಧಿಕ ಸ್ವತ್ತುಗಳು ದಾನ ರೂಪದಲ್ಲಿ ಈ ಕೇಂದ್ರಕ್ಕೆ ಹರಿದು ಬಂದಿವೆ.

**

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಇಲ್ಲಿ ಪ್ರೋತ್ಸಾಹ ಸಿಗುತ್ತಿದೆ. ನಗರ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಶಾಲೆ ಆಧುನಿಕ ಶೈಲಿಯಲ್ಲಿ ಶಿಕ್ಷಣ ದೊರಕುತ್ತಿದೆ – 
ಮಿತ್ರಕುಮಾರಿ ಚಿಕ್ಮುಳಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ

**

ಮಕ್ಕಳ ಪೋಷಕರನ್ನು ಕೇಳಿಕೊಂಡೆ. ಯಾರೊಬ್ಬರು ಹಿಂಜರಿಯದೆ ಶಾಲೆಗೆ ಸವಲತ್ತು ಒದಗಿಸಲು ಮುಂದೆ ಬಂದರು – ಲತಾ ಅಂಬೆಕಲ್ಲು, ಬಳ್ಳಕ ಅಂಗನವಾಡಿ ಕಾರ್ಯಕರ್ತೆ.

**

 ಲೋಕೇಶ್ ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.