ADVERTISEMENT

ತಜ್ಞರು, ಹೋರಾಟ ಸಮಿತಿಯೊಂದಿಗೆ ಸಭೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:05 IST
Last Updated 15 ಅಕ್ಟೋಬರ್ 2012, 8:05 IST

ನೆಲ್ಯಾಡಿ (ಉಪ್ಪಿನಂಗಡಿ): ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮ ಹೆಲಿಕಾಪ್ಟರ್ ಮೂಲಕ ಎಂಡೊ ಸಿಂಪಡಿಸಿದ ಗ್ರಾಮಗಳು ಮತ್ತು ಅದರ ಅಸುಪಾಸಿನ ಹಲವು ಗ್ರಾಮಗಳಲ್ಲಿ ಎಂಡೊ ಸಂತ್ರಸ್ತರಿದ್ದಾರೆ. ಆದರೆ ಸಮೀಕ್ಷೆಗೆ ಕೇವಲ 78 ಗ್ರಾಮಗಳನ್ನು ಮಾತ್ರ ಸೂಚಿಸಿದ್ದು, ಇದರಿಂದ ಗೊಂದಲ ಉಂಟಾಗಿದೆ.

ಜತೆಗೆ ಸಂತ್ರಸ್ತರು ಅನ್ಯಾಯಕ್ಕೊಳ ಗಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ತಜ್ಞರು ಮತ್ತು ಹೋರಾಟ ಸಮಿತಿಯ ಸಭೆ ನಡೆಸಬೇಕು ಎಂದು ಎಂಡೊ ಹೋರಾಟ ಸಮಿತಿ ಅಧ್ಯಕ್ಷ ಶ್ರಿಧರ ಗೌಡ ಜಿಲ್ಲಾಧಿಕಾರಿಯನ್ನು ಮನವಿಯಲ್ಲಿ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಹೋರಾಟ ಸಮಿತಿಯ ಗಮನಕ್ಕೆ ಬಂದ ಪ್ರಕಾರ 92 ಗ್ರಾಮಗಳು ಒಳಗೊಂಡಿದೆ. ಆದರೆ 78 ಗ್ರಾಮಗಳನ್ನು ಮಾತ್ರ ಸೂಚಿಸಲಾಗಿದೆ. ಎಂಡೊ ಪೀಡಿತರಿರುವ ಹಲವು ಗ್ರಾಮಗಳನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ. ಇದರಿಂದ ಗೊಂದಲ ಉಂಟಾಗಿದೆ. ನಿಗಮ ಎಂಡೊ ಸಿಂಪಡಿಸಿದ ಆಸುಪಾಸಿನ ಗ್ರಾಮಗಳಲ್ಲಿ ಇದ್ದವರನ್ನು ಬೇರೆ ಊರಿಗೆ ಮದುವೆ ಮಾಡಿ ಕೊಡಲಾಗಿದ್ದು, ಅಂತಹರು ಪೀಡಿತರಾಗಿದ್ದು ಈ ಸಮೀಕ್ಷೆಯಿಂದ ಹೊರ ಉಳಿದರೆ ಆ ಸಂತ್ರಸ್ತರಿಗೆ ಅನ್ಯಾಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸರ್ಕಾರ ಪರಿಹಾರ ಮತ್ತು ಪುನರ್ವಸತಿಯ ಬಗ್ಗೆ ಮಾತನಾಡುತ್ತಿದೆಯಾದರೂ ಇದುವರೆಗೆ ಎಂಡೊ ದುಷ್ಪರಿಣಾಮಗಳ ಕುರಿತು ಸಂಶೋಧನೆ ನಡೆಸಿದ ತಜ್ಞರು, ಸುಪ್ರೀಂ ಕೋರ್ಟ್‌ನಲ್ಲೂ ದಾವೆ ಹೂಡಿದ ಕರ್ನಾಟಕದ ಹೋರಾಟಗಾರರು ಮತ್ತು ಹೋರಾಟ ಸಮಿತಿಗಳೊಂದಿಗೆ ಚರ್ಚಿಸದಿರುವುದು ಅವ್ಯವಸ್ಥೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಸುಮಾರು 6,500 ಸಾವಿರ ಸಂತ್ರಸ್ತರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅತ್ಯಂತ ನೋವಿನ ವಿಚಾರ. ಎಂಡೊ ಸಂತ್ರಸ್ತರ ವಿಚಾರವು ಅತ್ಯಂತ ಗಂಭೀರವಾಗಿರುವುದರಿಂದ ಈ ಹಿಂದೆಯೆ ಸಲಹಾ ಸಮಿತಿ ರಚಿಸುವಂತೆ ಆಗ್ರಹಿಸಿದ್ದೆವು.

ಆದರೆ ಸರಿಯಾದ ರೀತಿಯಲ್ಲಿ ಸಮಾಲೋಚನೆ ನಡೆಯದೆ ನ್ಯಾಯಾಲಯಕ್ಕೂ ಕೂಡ ಸ್ಪಷ್ಟ ಮಾಹಿತಿ ದೊರೆಯದೆ ಅದೆಷ್ಟೊ ಜನರಿಗೆ ಅನ್ಯಾಯವಾಗಲಿದೆ. ಹಾಗಾಗಿ ತಜ್ಞರೊಂದಿಗೆ ವಿವಿಧ ಸಂಘಟನೆಗಳ ಸಭೆ ಕರೆದು ಸಮಾಲೋಚನೆ ನಡೆಸಿ ಸಲಹಾ ಸಮಿತಿಯನ್ನು ರಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.