ADVERTISEMENT

ತಿಂಗಳೊಳಗೆ ಕ್ರಮ: ಎಸ್‌ಪಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 9:40 IST
Last Updated 14 ಮಾರ್ಚ್ 2011, 9:40 IST

ಮಂಗಳೂರು: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಭರವಸೆ ನೀಡಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಭಾನುವಾರ ಪರಿಶಿಷ್ಟ ಜಾತಿ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎಂದು ಈಗಾಗಲೆ ಸರ್ಕಾರಿ ಆದೇಶವಾಗಿದ್ದು ಈ ಸಂಬಂಧ ಸುತ್ತೋಲೆಯನ್ನು ಎಲ್ಲ ಕಚೇರಿಗಳಿಗೆ ಕಳುಹಿಸಲಾಗಿದೆ. ಆದರೆ ಸಮನ್ವಯ ಹಾಗೂ ಜಾಗೃತಿ ಕೊರತೆಯಿಂದ ಇನ್ನೂ ಹಲವು ಕಚೇರಿಗಳಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ಈ ತಿಂಗಳೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಪೊಲೀಸ್ ಸಂಬಂಧಿ ಮಾಹಿತಿಗೆ ಈಗಲೂ ಅನೇಕರು 100 ದೂರವಾಣಿ ಸಂಪರ್ಕಿಸುತ್ತಾರೆ. ಆದರೆ ಈ ಸಂಖ್ಯೆಯ ಪ್ರಯೋಜನವಾಗುವುದು ನಗರ ವ್ಯಾಪ್ತಿ ಜನರಿಗೆ. ಗ್ರಾಮಾಂತರ ಭಾಗದವರಿಗೆ ಈ ಸಂಖ್ಯೆ ಈಗ ಬಳಕೆಗೆ ಬರುತ್ತಿಲ್ಲವಾದ್ದರಿಂದ ಬರುವ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪೊಲೀಸರ ಕುರಿತು ಶಾಲಾ ಮಕ್ಕಳಿಗೆ ಅಗತ್ಯ ಮಾಹಿತಿ ಸಿಕ್ಕುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್‌ಪಿ, ತಿಂಗಳಿಗೊಮ್ಮೆ ಶಾಲೆಯ ಮಕ್ಕಳು ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಈಗ ಇದೆ. ಇದರೊಂದಿಗೆ ಆಯಾ ಗ್ರಾಮಗಳ ಗಸ್ತು ಕರ್ತವ್ಯದಲ್ಲಿರುವ ಕಾನ್‌ಸ್ಟೇಬಲ್ ಅವರೇ ದಲಿತ ಕಾಲೊನಿಗೆ ತೆರಳಿ ಅಲ್ಲಿಯ ಕುಂದುಕೊರತೆ ವಿಚಾರಿಸಲು ತಾವು ಶೀಘ್ರ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಬಂಟ್ವಾಳ ತಾಲ್ಲೂಕಿನ ಚೇಳೂರು ಎಂಬಲ್ಲಿ ಬಿಜೆಪಿ ಹಾಗೂ ಬಜರಂಗ ದಳದವರ ದಬ್ಬಾಳಿಕೆಯಿಂದ ಗ್ರಾಮದ ದಲಿತರು ಭಯಭೀತರಾಗಿದ್ದು ಸೂಕ್ತ ರಕ್ಷಣೆ ನೀಡಿ ಎಂದು ಮುಖಂಡರು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಅಡುಗೆಯವರಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಮಹಿಳೆಯರು ಮೇಲಧಿಕಾರಿಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.

ಬೆಳ್ತಂಗಡಿ ತಾಲ್ಲೂಕಿನ ಮೆಲಂತಬೆಟ್ಟು ಎಂಬಲ್ಲಿ ದಲಿತರಿಗೆ ಅಂಚೆ ಕಚೇರಿ ಪ್ರವೇಶಕ್ಕೆ ಇದ್ದ ನಿರ್ಬಂಧ ವಿವಾದ ಈಗ ರಾಜಿ ಪಂಚಾಯಿತಿಯಲ್ಲಿ ಪೂರ್ಣಗೊಂಡಿದ್ದು ಈಗ ಅಲ್ಲಿ ಸಮಸ್ಯೆ ಇಲ್ಲ ಎಂದು ಎಸ್‌ಪಿ ಸಭೆಗೆ ತಿಳಿಸಿದಾಗ  ಈ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದಲಿತ ಮುಖಂಡ ಎಸ್.ಪಿ. ಆನಂದ್, ಜಿಲ್ಲೆಯಲ್ಲಿ ಅನೇಕ ಕಡೆ ದಲಿತರ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯ ಪ್ರಕರಣ ಮುಚ್ಚಿಹಾಕಲು ಮೇಲ್ವರ್ಗದವರು ರಾಜಿ ಪಂಚಾಯಿತಿ ಏರ್ಪಡಿಸುತ್ತಾರೆ. ಇದು ದಲಿತರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ಅನೇಕ ಸಂದರ್ಭಗಳಲ್ಲಿ ಪ್ರಕರಣಗಳೇ ದಾಖಲಾಗುವುದಿಲ್ಲ ಎಂದರು.

ಮೂಲ್ಕಿಯ ಮೋಹನ್ ರಾಣ್ಯ ಕೊಲೆ ಆರೋಪಿಯ ಸ್ಪಷ್ಟ ಸುಳಿವು ಸಿಕ್ಕಿದ್ದು ಆತ ಈಗ ಹೊರದೇಶದಲ್ಲಿರುವುದರಿಂದ ಬಂಧನ ವಿಳಂಬವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 40 ದಾಟಿದವರಿಗೆ ಮದ್ಯ ಮುಕ್ತವಾಗಿ ಸಿಗುವಂತೆ ನೋಡಿಕೊಳ್ಳಿ ಎಂಬ ವೃದ್ಧರೊಬ್ಬರ ಸಲಹೆಗೆ ಉತ್ತರಿಸಿದ ಎಸ್‌ಪಿ, ಈ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದರು.

ಇದೇ ಸಮಯದಲ್ಲಿ ಫೋನ್ ಇನ್ ಕಾರ್ಯಕ್ರಮವೂ ನಡೆದಿದ್ದು ಜಿಲ್ಲೆಯ ಹಲವರು ಫೋನ್ ಮೂಲಕವೇ ಎಸ್‌ಪಿ ಅವರಿಂದ ಉತ್ತರ ಪಡೆದರು. ಪುತ್ತೂರು ಎಎಸ್‌ಪಿ ಡಾ. ರೋಹಿಣಿ, ಹೆಚ್ಚುವರಿ ಎಸ್‌ಪಿ ಪ್ರಭಾಕರ, ದಲಿತ ಮುಖಂಡ ಕೇಶವ, ಗೋಪಾಲ ಕಾಡಮಟ್ಟು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ವಲಯದ ಪೊಲೀಸ್ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.