ADVERTISEMENT

ತ್ಯಾಜ್ಯ ರಾಶಿ: ಸಾಂಕ್ರಾಮಿಕ ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 8:30 IST
Last Updated 10 ಜೂನ್ 2011, 8:30 IST

ಬಂಟ್ವಾಳ: ತಾಲ್ಲೂಕಿನ ಕೇಂದ್ರ ಸ್ಥಾನ ಬಿ.ಸಿ.ರೋಡ್‌ನಲ್ಲಿ ಇದೀಗ ತ್ಯಾಜ್ಯ ರಾಶಿ ತುಂಬಿಕೊಂಡಿದ್ದು, ಬಂಟ್ವಾಳ-ಮೂಡುಬಿದಿರೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಾಗುವ ಎಲ್ಲರನ್ನೂ ‘ಸ್ವಾಗತಿಸುತ್ತಿದೆ’.
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವೃತ್ತದ ಬಳಿ ಕಳೆದ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ತ್ಯಾಜ್ಯ-ವ್ಯಾಜ್ಯವು ಪುರಸಭೆಗೆ ಕಳಂಕ ತಂದಿದೆ ಮಾತ್ರವಲ್ಲ, ಬಹುತೇಕ ಸಾಮಾನ್ಯ ಸಭೆಯ ಚರ್ಚೆಯ ಅವಧಿಯನ್ನು ನುಂಗಿಹಾಕಿದೆ.

ಕಳೆದ ಐದು ವರ್ಷಗಳ ಹಿಂದೆ ಮಾಸಿಕ ರೂ.1.38 ಲಕ್ಷದಂತೆ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿದ್ದ ಶರತ್ ಶೆಟ್ಟಿ ವಿರುದ್ಧ ಪುರಸಭೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಒಟ್ಟು 20 ಜನರನ್ನು ಪುರಸಭಾ ವ್ಯಾಪ್ತಿಯ ಶುಚಿತ್ವಕ್ಕಾಗಿ ನಿಯೋಜಿಸಿದ್ದ ಗುತ್ತಿಗೆದಾರರು, ಲಾರಿ ಮೂಲಕ ವಾರಕ್ಕೆ ಆರು ಬಾರಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.
 
ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ವಹಿಸಿಕೊಳ್ಳಲು ಯಾರೂ ಮುಂದೆ ಬಾರದ  ಹಿನ್ನೆಲೆಯಲ್ಲಿ ಮೊತ್ತವನ್ನು ಮಾಸಿಕ ರೂ.1.75 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಅವರದ್ದು.ಈ ನಡುವೆ ಪುರಸಭೆಯಲ್ಲಿ ಶಹರಿ ರೋಜ್‌ಗಾರ್ ಯೋಜನೆಯಡಿ ಈಗಾಗಲೇ ಎರಡು ಗುಂಪುಗಳು  ಮೂರು ಟ್ರ್ಯಾಕ್ಟರ್ ಮೂಲಕ ಪ್ರತೀ ಮನೆ (ರೂ.30), ಹೋಟೆಲ್ (ರೂ.300ರಿಂದ 600), ಅಂಗಡಿ (ರೂ.50) ಹೀಗೆ ತ್ಯಾಜ್ಯ ಸಂಗ್ರಹದಲ್ಲಿ ತೊಡಗಿದೆ.

ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಸರಕಾರ ಈಗಾಗಲೇ ಎಂಟು ಎಕರೆ ಜಮೀನು ಮಂಜೂರು ಮಾಡಿದ್ದು, ಸುತ್ತಲೂ ಆವರಣ ಗೋಡೆ ನಿರ್ಮಾಣವಾಗಿದೆ. ಮುಂದಿನ ಎರಡು ತಿಂಗಳ ಒಳಗೆ ತ್ಯಾಜ್ಯ ವಿಲೇವಾರಿ ತ್ವರಿತವಾಗಿ ಸಾಧ್ಯವಾಗಲಿದೆ.

ಈ ನಡುವೆ ಪುರಸಭೆಯಲ್ಲಿ ಖಾಲಿಯಿದ್ದ ಹಿರಿಯ ಆರೋಗ್ಯ ಇನ್ಸ್‌ಪೆಕ್ಟರ್ ಮತ್ತು ಪರಿಸರ ಎಂಜಿನಿಯರ್ ಹುದ್ದೆ ಗುರುವಾರ ಭರ್ತಿಯಾಗಿದ್ದು, ರಾಜಶೇಖರ್ ಮತ್ತು ರಕ್ಷಿತ್ ಎಂಬವರನ್ನು ಸರ್ಕಾರ ನಿಯೋಜಿಸಿದೆ.
ಪುರಸಭಾ ವ್ಯಾಪ್ತಿಯಲ್ಲಿ ಕಸದ ತೊಟ್ಟಿ ತೆರವುಗೊಳಿಸಿ, ಕಸ ಸಂಗ್ರಹ ಮೂಲಕ ನಗರ ಶುಚಿಯಾಗಿಡಲು ಜನತೆ ಸಹಕಾರ ಅಗತ್ಯ ಎನ್ನುತ್ತಾರೆ ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ. 

ಈ ಮಧ್ಯೆ ತ್ಯಾಜ್ಯದಿಂದ ಈಗಾಗಲೇ ಚಿಕುನ್‌ಗುನ್ಯಾ ಮತ್ತು ಮಲೇರಿಯಾ ಜ್ವರಬಾಧೆಯಿಂದ ಕಂಗೆಟ್ಟಿರುವ ಇಲ್ಲಿನ ಜನತೆಗೆ ಸಾಂಕ್ರಾಮಿಕ ರೋಗ ಭೀತಿ ಆವರಿಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.