ADVERTISEMENT

`ದ.ಕ: ಶಿಶು ಮರಣ ಪ್ರಮಾಣ ಇಳಿಮುಖ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:39 IST
Last Updated 17 ಡಿಸೆಂಬರ್ 2012, 9:39 IST

ಮಂಗಳೂರು: ವಿದ್ಯಾವಂತ ಸಮಾಜ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುವುದರಿಂದ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣದಲ್ಲಿ ಗಣನೀಯ  ಇಳಿಮುಖವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಎಂ.ರುಕ್ಮಿಣಿ ಹೇಳಿದರು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಪ್ರಸೂತಿ ಚಿಕಿತ್ಸೆ ಹಾಗೂ ಸ್ತ್ರೀರೋಗ ತಜ್ಞ ವಿಭಾಗದ ಸಹಯೋಗದಲ್ಲಿ `ಪ್ರಸೂತಿ ಚಿಕಿತ್ಸೆಯ ನಿರ್ಣಾಯಕ ಘಟ್ಟದಲ್ಲಿ ವೈದ್ಯರ ಮೇಲ್ವಿಚಾರಣೆ' ವಿಷಯದ ಮೇಲೆ ಭಾನುವಾರ ಅಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸವ ಸಂದರ್ಭದಲ್ಲಿ ಗರ್ಭಿಣಿಯು ಮೃತಳಾದರೆ ವೈದ್ಯರನ್ನು ನೇರವಾಗಿ ಅರೋಪಿಯನ್ನಾಗಿಸುವ ಪ್ರವೃತ್ತಿ ಶತಮಾನಗಳಿಂದಲೂ ಬೆಳೆದುಬಂದಿದೆ. ಆದರೆ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ನೈಜ ಕಾರಣ ತಿಳಿಯಲು ಸಾಧ್ಯ. ಇದಕ್ಕೆ ಗರ್ಭಿಣಿಯ ಕುಟುಂಬಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗರ್ಭಿಣಿಯ ಅರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಯನ್ನು ಸಮೀಪಿುವ ಬದಲು ವ್ಯೆದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.

`ತಾಯಿಯ ರಕ್ಷಣೆ-ಪ್ರಸೂತಿ ಚಿಕಿತ್ಸೆಯಲ್ಲಿ ಅಸ್ಪತ್ರೆಯ ಯಶಸ್ವಿ ಪಾತ್ರ' ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ತಿರುವನಂತಪುರಂ ಎಸ್‌ಯುಟಿ ಆಸ್ಪತ್ರೆ ಮುಖ್ಯಸ್ಥ ಡಾ. ವಿ, ರಾಜಶೇಖರನ್ ನಾಯರ್, ಆಸ್ಪತ್ರೆ ತಲುಪಿದರೆ ಗರ್ಭಿಣಿ ಸುರಕ್ಷಿತ ಎಂಬ ವಿಶ್ವಾಸವು ಜನಸಾಮಾನ್ಯರಲ್ಲಿದೆ. ಪ್ರತಿಯೋರ್ವರಿಗೂ ಸಮಾನ ಮನೋಭಾವದಿಂದ ಶ್ರದ್ಧೆಯಿಂದ ಆರೈಕೆ ನೀಡುವ ಮಹತ್ತರ ಜವಾಬ್ಧಾರಿ ಆಸ್ಪತ್ರೆಗಳ ಸಿಬ್ಬಂದಿ ವರ್ಗದವರಿಗೆ ಇದೆ ಎಂದರು. ಅಮೆರಿಕಾದ ಒಟ್ಟು ಮರಣ ಪ್ರಮಾಣದ ಶೇ 5ರಷ್ಟು ಮಂದಿ ತುರ್ತು ವೈದ್ಯಕೀಯ ನೆರವು ದೊರೆಯದ ಕಾರಣ ಸಂಭವಿಸುತ್ತಿರುವುದಾಗಿ ಅವರು ಹೇಳಿದರು. ಸಾವಿನ ನಂತರ ಕಾರಣದ ಹುಡುಕಾಟಕ್ಕಿಂತಲೂ ಪರಿಸ್ಥಿತಿಯ ಅವಲೋಕನವನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು ಎಂದು ಅವರು ವೈದ್ಯರಿಗೆ ಕಿವಿಮಾತು ಹೇಳಿದರು. ಆರೋಗ್ಯ ಕ್ಷೇತ್ರ ವ್ಯಾಪಾರಿ ತಾಣಗಳಾಗಿ ಬದಲಾಗುತ್ತಿರುವುದಕ್ಕೆ ಅವರು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಫಾ. ಪ್ಯಾಟ್ರಿಕ್ ರಾಡ್ರಿಗಸ್ ಮಾತನಾಡಿ, ಶಿಶು ಮರಣದ ಕುರಿತು ಜನಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು, ಎನ್‌ಜಿಓಗಳು ಸರ್ಕಾರದ ಜೊತೆಗೆ ಕೈ ಜೋಡಿಸಬೇಕು ಎಂದರು.

ಕರ್ನಾಟಕ ವೈದ್ಯಕೀಯ ಮಂಡಳಿಯ ಡಾ.ಸೋಮಶೇಖರಪ್ಪ, ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಫಾ.ಡೆನ್ನಿಸ್ ಡೇಸಾ, ಡೀನ್ ಜಯಪ್ರಕಾಶ್ ಆಳ್ವ, ಆರೋಗ್ಯ ಸೇವೆಗಳ ಮುಖ್ಯಸ್ಥ ಡಾ.ಬಿ.ಸಂಜೀವ ರೈ, ಸಂಯೋಜಕಿ ಡಾ. ಸುಜಯ ರಾವ್, ಸಂಘಟನಾ ಕಾರ್ಯದರ್ಶಿ ಡಾ.ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.