ADVERTISEMENT

ದಿನನಿತ್ಯದ ವಹಿವಾಟು ಸಾಮಾನ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:04 IST
Last Updated 29 ಮೇ 2018, 9:04 IST

ಮಂಗಳೂರು: ರೈತರ ಸಾಲಮನ್ನಾ ಮಾಡಲು ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮೀಣ ಭಾಗದ ಕೆಲವೆಡೆ ಬಸ್‌ಗಳ ಸಂಚಾರಕ್ಕೆ ಸ್ಪಲ್ಪ ತೊಂದರೆ ಆಗಿದ್ದು, ಉಳಿದಂತೆ ಬಂದ್‌ನ ಯಾವುದೇ ಸ್ಥಿತಿ ಜಿಲ್ಲೆಯಲ್ಲಿ ಗೋಚರಿಸಲಿಲ್ಲ.

ಸೋಮವಾರ ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. ಖಾಸಗಿ ಬಸ್‌ಗಳು ಬಂದ್‌ಗೆ ಬೆಂಬಲ ನೀಡದೇ ಇದ್ದುದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ. ಇನ್ನು ಸರ್ಕಾರಿ ಬಸ್‌ಗಳ ಓಡಾಟವೂ ನಿತ್ಯದಂತೆಯೇ ಇತ್ತು. ಅಟೋ ರಿಕ್ಷಾ, ಟ್ಯಾಕ್ಸಿಗಳೂ ಸಹಜ ಓಡಾಟ ನಡೆಸಿದವು.

ಸರ್ಕಾರಿ ಕಚೇರಿಗಳು, ಬ್ಯಾಂಕ್‌, ಅಂಚೆ ಇಲಾಖೆ ಸೇರಿದಂತೆ ಯಾವುದೇ ಸೇವೆಗೆ ಅಡ್ಡಿಯಾಗಿಲ್ಲ. ಸೋಮವಾರ ಮಾರುಕಟ್ಟೆಯಲ್ಲೂ ಜನದಟ್ಟಣೆ ಹೆಚ್ಚಾಗಿಯೇ ಇತ್ತು. ಶಾಲೆ ಪ್ರಾರಂಭವಾಗಿದ್ದರಿಂದ ಪಾಲಕರು ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗೆ ಬಂದಿದ್ದರು. ಅಂಗಡಿಗಳು ಬಾಗಿಲು ತೆರೆದು ಎಂದಿನಂತೆಯೇ ವಹಿವಾಟು ನಡೆಸಿದವು.

ADVERTISEMENT

ಪುತ್ತೂರು ತಾಲ್ಲೂಕಿನ ಕಡಬ, ಕೋಡಿಂಬಾಳ ಪೇಟೆ, ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿದ್ದರು. ಬೆಳ್ತಂಗಡಿ ತಾಲ್ಲೂಕಿನ ಗ್ರಾಮಗಳಲ್ಲಿ ಕೆಲಹೊತ್ತು ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು.

ಬೆಂಬಲ ಇಲ್ಲ: ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ, ಮೀನಮೇಷ ಎಣಿಸುತ್ತಿದ್ದು, ಇದನ್ನು ವಿರೋಧಿಸಿ ರೈತರು ಕರೆ ನೀಡಿರುವ ಬಂದ್‌ಗೆ ಸ್ವಯಂ ಪ್ರೇರಿತ ಬೆಂಬಲ ನೀಡುವಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮನವಿ ಮಾಡಿದ್ದರು.

ಆದರೆ, ಖಾಸಗಿ ಬಸ್‌ ಮಾಲೀಕರು, ಸಂಘಟನೆಗಳು, ವರ್ತಕರು ಸೇರಿದಂತೆ ಯಾವುದೇ ಸಂಘ–ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಬಹುತೇಕ ಜನಜೀವನ ಸಾಮಾನ್ಯವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ‘ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘಟನೆಗಳಾಗಲಿ ಬಂದ್‌ಗೆ ನಮ್ಮ ಬೆಂಬಲ ಕೋರಿಲ್ಲ. ಹೀಗಾಗಿ ಎಂದಿನಂತೆಯೇ ಖಾಸಗಿ ಬಸ್‌ಗಳನ್ನು ಓಡಿಸಲಾಗಿದೆ. ಅದರಲ್ಲೂ ಸೋಮವಾರ ಶಾಲೆಗಳು ಪ್ರಾರಂಭವಾಗಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಯಿತು’ ಎಂದು ತಿಳಿಸಿದ್ದಾರೆ.

ಬಂದ್ ವಿಫಲ: ‘ರಾಜ್ಯದಲ್ಲಿ ಬಿಜೆಪಿ ಕರೆ ಕೊಟ್ಟ ಬಂದ್ ಸಂಪೂರ್ಣ ವಿಫಲವಾಗಿದ್ದು, ಇದಕ್ಕೆ ಸ್ಪಂದಿಸದ ರಾಜ್ಯದ ಜನತೆಗೆ ಜೆಡಿಎಸ್ ಕೃತಜ್ಞತೆ ಸಲ್ಲಿಸುತ್ತದೆ’ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಸುಶೀಲ್‌ ನರೋನ್ಹ ತಿಳಿಸಿದ್ದಾರೆ.

‘ಕೇಂದ್ರದಲ್ಲಿ ನಾಲ್ಕು ವರ್ಷ ಆಡಳಿತ ಅವಧಿ ಪೂರೈಸಿದ ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ವ್ಯಾಪಾರ, ವಹಿವಾಟು ಸ್ಥಗಿತಗೊಂಡು ಅಗತ್ಯ ವಸ್ತುಗಳು ಹಾಗೂ ಪೆಟ್ರೋಲ್‌ ಬೆಲೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹತಾಶೆಗೊಂಡಿರುವ ಜನರು ಬಿಜೆಪಿ ವಿರುದ್ಧ ಈ ರೀತಿಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಕರೆ ಕೊಟ್ಟ ಬಂದ್‌ ಗೆ ಬೆಂಬಲ ನೀಡಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.