ADVERTISEMENT

ದೀಪಕ್‌ ರಾವ್‌ ಕೊಲೆ ಪ್ರಕರಣ 13 ಮಂದಿ ವಿರುದ್ಧ ಆರೋಪಪಟ್ಟಿ

ಕಾಟಿಪಳ್ಳ ದೀಪಕ್‌ ರಾವ್‌ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 10:44 IST
Last Updated 5 ಏಪ್ರಿಲ್ 2018, 10:44 IST

ಮಂಗಳೂರು: ಸುರತ್ಕಲ್‌ನ ಕಾಟಿ‍ಪಳ್ಳದಲ್ಲಿ ಜನವರಿ 3ರಂದು ನಡೆದಿದ್ದ ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ 13 ಮಂದಿ ಆರೋಪಿಗಳ ವಿರುದ್ಧ ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯಕ್ಕೆ ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದ ತನಿಖಾ ತಂಡ ಶನಿವಾರ ಆರೋಪಪಟ್ಟಿ ಸಲ್ಲಿಸಿದೆ.

ಕೃಷ್ಣಾಪುರ ಕಾಟಿಪಳ್ಳದ ಮೊಹಮ್ಮದ್ ನವಾಝ್‌ ಅಲಿಯಾಸ್‌ ಪಿಂಕಿ ನವಾಝ್‌ , ರಿಜ್ವಾನ್‌ ಅಲಿಯಾಸ್‌ ಇಜ್ಜು ಅಲಿಯಾಸ್‌ ರಿಜ್ಜು, ಮುಹಮ್ಮದ್ ನೌಷಾದ್‌, ಮುಹಮ್ಮದ್ ಇರ್ಷಾನ್‌, ಅಬ್ದುಲ್‌ ಅಝೀಜ್‌, ಅಬ್ದುಲ್‌ ಅಝೀಮ್‌, ಚೊಕ್ಕಬೆಟ್ಟು ನಿವಾಸಿಮುಹಮ್ಮದ್ ರಫೀಕ್‌ ಅಲಿಯಾಸ್‌ ಮಾಂಗೋ ರಫೀಕ್‌, ಇರ್ಫಾನ್‌, ಕಾಟಿಪಳ್ಳದ ಮುಹಮ್ಮದ್ ಅನಾಸ್‌ ಅಲಿಯಾಸ್‌ ಅಂಚು, ಮುಹಮ್ಮದ್‌ ಝಾಹೀದ್‌ ಅಲಿಯಾಸ್‌ ಜಾಹೀ, ಹಿದಾಯತುಲ್ಲಾ, ಚೊಕ್ಕಬೆಟ್ಟು ನಿವಾಸಿ ಇಮ್ರಾನ್‌ ಮತ್ತು ಕಾಟಿಪಳ್ಳದ ಸಫ್ವಾನ್‌ ಎಂಬುವವರು ದೀಪಕ್‌ ರಾವ್‌ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಪಿಂಕಿ ನವಾಝ್‌ ನೇತೃತ್ವದ ತಂಡ 2016ರಲ್ಲಿ ಭರತ್‌ ರಾಜ್‌ ಎಂಬಾತನ ಕೊಲೆಗೆ ಯತ್ನಿಸಿತ್ತು. ಆ ಬಳಿಕ ಹಿಂದೂ ರೌಡಿಗಳ ಗುಂಪು ಮತ್ತು ಪಿಂಕಿ ನೇತೃತ್ವದ ಮುಸ್ಲಿಂ ರೌಡಿಗಳ ನಡುವೆ ವೈರತ್ವ ಬೆಳೆದಿತ್ತು. ಹಿಂದೂ ಗುಂಪು ತಮ್ಮಲ್ಲಿ ಯಾರನ್ನಾದರೂ ಕೊಲೆ ಮಾಡಬಹುದು ಎಂಬ ಸಂಶಯ ಪಿಂಕಿ ತಂಡವನ್ನು ಕಾಡುತ್ತಿತ್ತು. ಇದಕ್ಕಾಗಿ ಹಿಂದೂ ರೌಡಿಗಳಲ್ಲಿ ಪ್ರಮುಖರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು’ ಎಂಬ ಅಂಶ ಆರೋಪಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೆಲವರನ್ನು ಗುರುತಿಸಿಕೊಂಡಿದ್ದ ಆರೋಪಿಗಳು ಅವರ ಕೊಲೆಗೆ ಯತ್ನಿಸಿದ್ದರು. ಆದರೆ, ಪ್ರಯತ್ನ ಸಫಲವಾಗಿರಲಿಲ್ಲ. ಆ ಬಳಿಕ ಇದೇ ವಿಚಾರವಾಗಿ ಅವರ ನಡುವೆ ವಾಗ್ವಾದವೂ ಆಗಿತ್ತು. ಡಿಸೆಂಬರ್‌ 27ರಂದು ಕಾಟಿಪಳ್ಳದಲ್ಲಿ ಬಂಟಿಂಗ್ಸ್ ಕಟ್ಟುವ ಸಂಬಂಧ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದ ಬಳಿಕ ಮತ್ತೆ ಈ ತಂಡ ಚುರುಕಾಗಿತ್ತು. ಹಿಂದೂಗಳಲ್ಲಿ ಯಾರನ್ನಾದರೂ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಹವಣಿಸುತ್ತಿತ್ತು ಎಂಬ ಉಲ್ಲೇಖವೂ ಆರೋಪಪಟ್ಟಿಯಲ್ಲಿದೆ.

ಬಂಟಿಂಗ್‌ ಗಲಾಟೆ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ದೀಪಕ್‌ ಕೊಲೆಗೆ ತೀರ್ಮಾನಿಸಿದ್ದ ತಂಡ ಅವರನ್ನು ಹಿಂಬಾಲಿಸಿತ್ತು. ದೀಪಕ್‌ ಬಜರಂಗದಳದ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದುದು ಮತ್ತು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದುದು ಆಯ್ಕೆಗೆ ಕಾರಣ ಎಂಬುದಾಗಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂಬ ಅಂಶವನ್ನು ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಸಫ್ವಾನ್‌ ತಲೆಮರೆಸಿಕೊಂಡಿದ್ದು, ಉಳಿದ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಸುಮಾರು 500 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ತನಿಖೆ ಪೂರ್ಣಗೊಳಿಸಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.