ಕಡಬ (ಉಪ್ಪಿನಂಗಡಿ): ಕಳೆದ 37 ವರ್ಷಗಳಿಂದ ಶಿಥಿಲಗೊಂಡಿದ್ದ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಇದೀಗ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿದೆ. ಬ್ರಹ್ಮಕಲಶೋತ್ಸ ಮೇ 13ರಿಂದ 18ರವರೆಗೆ ನಡೆಯಲಿದೆ.
ಮೇ 20ರಿಂದ 28ರವರೆಗೆ ಏಕಾಹ ಭಜನೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಅಖಂಡ ಭಜನಾ ಸಪ್ತಾಹ ನಡೆಯಲಿದ್ದು ಇದಕ್ಕಾಗಿ ಸಿದ್ದತೆ ನಡೆಯುತ್ತಿವೆ. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ 50 ರಿಂದ 60 ಲಕ್ಷದವರೆಗೆ ವ್ಯಯಿಸಿ ದೇವಸ್ಥಾನ ಜೀರ್ಣೋದ್ಧಾರಗೊಳಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯಿಂದ ರೂ.10 ಲಕ್ಷ ಅನುದಾನದ ಭರವಸೆ ದೊರೆತಿದ್ದು, ಈಗಾಗಲೇ ರೂ. 3 ಲಕ್ಷ ಮಂಜೂರಾಗಿದೆ. ಊರಿನ ಭಕ್ತರು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಕೈ ಜೋಡಿಸಿದ್ದು ದೇಣಿಗೆ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ.
ಆರು ದಿನ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ, ಪ್ರತಿದಿನ 5 ರಿಂದ 10 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಮಾಂಭಕ್ಕಾಗಿ 14 ಸಾವಿರ ಚದರ ಅಡಿ ಚಪ್ಪರ ಹಾಕಲಾಗಿದೆ. ಎಂಟು ಸಾವಿರ ಚದರ ಅಡಿಯ ಚಪ್ಪರವನ್ನು ಅನ್ನಸಂತರ್ಪಣೆಗೆ ಸಿದ್ಧಗೊಳಿಸಲಾಗುತ್ತಿದೆ. ದೇವಾಲಯದ ವಾಸ್ತು ಶಿಲ್ಪವನ್ನು ಮಹೇಶ್ ಭಟ್ ಮುನಿಯಂಗಲ ಹಾಗೂ ದಾರುಶಿಲ್ಪಿ ಭದ್ರಯ್ಯ ಆಚಾರ್ಯ ನೇತೃತ್ವದಲ್ಲಿ ಕಟ್ಟಡದ ಕೆಲಸಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.