ADVERTISEMENT

ದೇರಳಕಟ್ಟೆ ಯೇನಪೋಯ ವೈದ್ಯರ ಸಾಧನೆ

15 ವರ್ಷಗಳ ಮಂಡಿ ನೋವಿಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 13:03 IST
Last Updated 20 ಏಪ್ರಿಲ್ 2013, 13:03 IST

ಉಳ್ಳಾಲ: ಕೇವಲ 12ನೇ ವರ್ಷದಲ್ಲಿ ಬಾಧಿಸತೊಡಗಿದ ಸಂಧಿವಾತ ಆಕೆಯ ಬದುಕಿನ ಸಂತಸವನ್ನೇ ಕಸಿದಕೊಂಡಿತ್ತು. ದೈನಂದಿನ ಚಟುವಟಿಕೆಗಳಿಗೆ ಹೆತ್ತವರನ್ನೇ ಅವಲಂಬಿಸಬೇಕಾಗಿತ್ತು. ಆದರೆ ದೇರಳಕಟ್ಟೆಯ ಯೇನಪೋಯ ವೈದ್ಯರು ಚಿಕಿತ್ಸೆ ನೀಡಿದ ಪರಿಣಾಮ 15 ವರ್ಷ ನರಳಾಟದಲ್ಲಿದ್ದ ಬಡ ಕುಟುಂಬದ  ವಿರಾಜಪೇಟೆಯ ಹಾಜಿರಾ (27) ಸಂಪೂರ್ಣ ಗುಣಮುಖಳಾಗಿದ್ದಾಳೆ.

ಹಾಜಿರಾ 12 ವರ್ಷಗಳವರೆಗೆ ಎಲ್ಲರಂತೆ ಆರೋಗ್ಯವಾಗಿ ಶಾಲೆಗೆ ಹೋಗುತ್ತಿದ್ದರು. ನಂತರ ಕೈ, ಕೈಬೆರಳುಗಳು ಹಾಗೂ ಭುಜಗಳ ಸಂಧಿನಲ್ಲಿ ಅತೀವವಾದ ನೋವು ಕಾಣಿಸಿಕೊಂಡಿತ್ತು. ಕ್ರಮೇಣ ಎರಡೂ ಕಾಲುಗಳಿಗೆ ನೋವು ಪಸರಿಸಿ ಕಾಲುಗಳ ಮಂಡಿ ಬಾತುಕೊಳ್ಳತೊಡಗಿದವು. ಇದರ ಪರಿಣಾಮ ಆಕೆಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಯಿತು.

ಮೈಸೂರಿನ ಆಸ್ಪತ್ರೆಗೆ ತೋರಿಸಿದಾಗ ಸಂಧಿವಾತದ ಬಗ್ಗೆ ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಏಳು ವರ್ಷಗಳ ಬಳಿಕ (20ನೇ ವರ್ಷದಲ್ಲಿ) ಆಕೆಯನ್ನು ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಯಿತು. ಎಲುಬು ಮತ್ತು ಕೀಲು ತಜ್ಞರು ತಪಾಸಣೆ ನಡೆಸಿ  ಶಸ್ತ್ರ ಚಿಕಿತ್ಸೆಯ ಮೂಲಕ ಸೊಂಟದ ಎಡ ಮತ್ತು ಬಲಭಾಗ ಕೃತಕ ಸಂಧು ಜೋಡಣೆ ಮಾಡಿದರು.

ಇದು ಯಶಸ್ವಿಯಾಯಿತಾದರೂ ನಾಲ್ಕು ವರ್ಷಗಳ ಬಳಿಕ ಬಲಮಂಡಿಯಲ್ಲಿ ಅತೀವ ನೋವು ಕಾಣಿಸಿದ್ದು ಮತ್ತೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಏಳು ತಿಂಗಳ ಬಳಿಕ ಕುತ್ತಿಗೆ ಬೆನ್ನು ಹುರಿ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡು ತಿರುಗಿಸಲು ಅಸಾಧ್ಯವಾಯಿತು.

ಈ ಸಂದರ್ಭ  ಮೂರನೇ ಬಾರಿ ಬದಲಿ ಮಂಡಿ ಜೋಡಣೆಯ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾಳೆ. ಆಕೆ ಆಸ್ಪತ್ರೆಯಿಂದ ಹಿಂತಿರುಗಿದ್ದು ದೈನಂದಿನ ಚಟುವಟಿಕೆಗೆ ಶಕ್ತಳಾಗಿದ್ದಾಳೆ ಎಂದು ಚಿಕಿತ್ಸೆಯ ನೇತೃತ್ವ ವಹಿಸಿದ್ದ ವೈದ್ಯ ಇಮ್ತಿಯ್ಾ ಅಹ್ಮದ್ ತಿಳಿಸಿದ್ದಾರೆ.

ರೋಗಿ ಹಿಂದಿನಂತಾಗಲು ಮಾಡಿದ ವಿವಿಧ ಶಸ್ತ್ರ ಚಿಕಿತ್ಸೆಗೆ ಬರೋಬ್ಬರಿ ಆರು ಲಕ್ಷ ತಗುಲಿದ್ದು ಅದನ್ನು ಮನ್ನಾ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ತಂಡದಲ್ಲಿ ಯೇನಪೋಯ ಮೆಡಿಕಲ್ ಕಾಲೇಜಿನ ಎಲುಬು ಮತ್ತು ಕೀಲು ವಿಭಾಗದ ವೈದ್ಯ ಅರವಿಂದ್, ಮಹೇಶ್, ರಿನಾಸ್ ಮತ್ತು ರಿಯ್ಾ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.