ADVERTISEMENT

ದೇಶಾಭಿಮಾನ ಬಿಂಬಿಸಿದ ರಾಷ್ಟ್ರ ದೇವೋಭವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:39 IST
Last Updated 7 ಜನವರಿ 2014, 6:39 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಂಗಡಿಗುಡ್ಡೆಯ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿರುವ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿ ಕಲಾವಿದರು ನೃತ್ಯರೂಪಕ ಪ್ರಸ್ತುತಪಡಿಸಿದರು. ಈ ನೃತ್ಯ ರೂಪಕ ರಾಷ್ಟ್ರಾಭಿಮಾನ ಬಿಂಬಿಸುವಲ್ಲಿ ಯಶಸ್ಸಾಯಿತು.

ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಕಲಾವಿದರು, ಭಾರತ್ ಮಾತಾಕಿ ಜೈ ನೃತ್ಯವನ್ನು ಮನ ಮುಟ್ಟುವಂತೆ ಪ್ರದರ್ಶಿಸಿದರು. ನಂತರ ವಂದೇ ಮಾತರಂ, ಪುಣ್ಯ ಭೂಮಿ ಭಾರತಿ, ವೀರ ಸನ್ಯಾಸಿ ವಿವೇಕಾನಂದ, ಶ್ರೀಕೃಷ್ಣ ಬಾಲ ಲೀಲೆ ಮತ್ತು ಭಗವದ್ಗೀತೆಗಳನ್ನು ಸಾಧರಪಡಿಸಿದರು. ಆ ಬಳಿಕ ಯೋಧನ ಕಥೆ, ಪರಶಿವಾಲಯ, ಉಜ್ವಲ ಇತಿಹಾಸ, ಜಯ ಭಾರತಿ ಮತ್ತು ರೈತನ ಜೀವನಗಾಥೆಯನ್ನು ನೃತ್ಯ ರೂಪಕದ ಮೂಲಕ ಅತ್ಯುತ್ತಮವಾಗಿ ಪ್ರದರ್ಶಿಸಿದರು.

ಉಪನ್ಯಾಸಕ ಆದರ್ಶ ಗೋಖಲೆಯ ನಿರೂಪ­ಣೆಯು ನೃತ್ಯ ರೂಪಕದ ಯಶಸ್ಸಿಗೆ ಕಲಶ­ಪ್ರಾಯವಾಗಿತ್ತು. ನಿರೂಪಣಾ ಸಾಹಿತ್ಯದಿಂದ ಸೇರಿದ್ದ ಸಭಿಕರಲ್ಲಿ ರಾಷ್ಟ್ರಭಕ್ತಿ ಉತ್ಥಾನವಾಗುವಂತೆ ಮಾಡಿದರು. ರಾಜೇಶ್ ಎನ್.ಎಸ್. ರೂಪಿಸಿದ ಧ್ವನಿ ಮತ್ತು ಬೆಂಕಿನ ಸಂಯೋಜನೆ ನೃತ್ಯಗಳು ಮನಮುಟ್ಟುವಂತೆ ಮಾಡಿತ್ತು.

ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ.ಕೆ.ಶೆಟ್ಟಿ, ನೃತ್ಯ ಗುರು ಶಾರದಾ ಮಣಿಶೇಖರ್, ನೃತ್ಯ ನಿರ್ದೇಶಕಿ ಶ್ರೀಲತಾ ನಾಗರಾಜ್, ನಿರೂಪಕ ಆದರ್ಶ ಗೋಖಲೆ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. ಸಹಾಯಕ ಕಾರ್ಯ­ನಿರ್ವಹಣಾಧಿಕಾರಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತಳೂರು ಚಂದ್ರಶೇಖರ್, ಕಿಶೋರ್ ಶಿರಾಡಿ, ಸುಬ್ರಹ್ಮಣ್ಯ ಭಟ್, ಮೋನಪ್ಪ ಮಾನಾಡು, ವನಜಾ ವಿ ಭಟ್, ಕಲಾವಿದ ಯಜ್ಞೇಶ್ ಆಚಾರ್ ಹಾಗೂ ಕಲಾವಿದರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.