ADVERTISEMENT

ನಾರಾಯಣ ಗುರು ಅಧ್ಯಯನ ಕೇಂದ್ರ ಸ್ಥಾಪನೆ

ಸಚಿವ ಅಭಯಚಂದ್ರ ಆಶಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:22 IST
Last Updated 22 ಜುಲೈ 2013, 10:22 IST
ಮೂಲ್ಕಿಯ ಬಿಲ್ಲವ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಭಾನುವಾರ ನಡೆದ 11ನೇ ವರ್ಷದ `ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರನ್ನು ಸಚಿವ ಕೆ.ಅಭಯಚಂದ್ರ ಜೈನ್ ಸನ್ಮಾನಿಸಿದರು.
ಮೂಲ್ಕಿಯ ಬಿಲ್ಲವ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಭಾನುವಾರ ನಡೆದ 11ನೇ ವರ್ಷದ `ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರನ್ನು ಸಚಿವ ಕೆ.ಅಭಯಚಂದ್ರ ಜೈನ್ ಸನ್ಮಾನಿಸಿದರು.   

ಮೂಲ್ಕಿ: `ಹಿಂದುಳಿದ ವರ್ಗದವರಿಗೆ ಧ್ವನಿಯಾಗಿ ಇಂದು ಸಮಾಜದಲ್ಲಿ ಭದ್ರತೆಯ ನೆಲೆ ಕಂಡಿರುವ ಬಿಲ್ಲವ ಸಮಾಜಕ್ಕೆ ಶಕ್ತಿಯಾಗಿ ಪ್ರೇರಣೆಯಾದ ನಾರಾಯಣಗುರುಗಳ ಆದರ್ಶವನ್ನು ಇತರ ಸಮಾಜಗಳೂ ತಿಳಿಯುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ನಾರಾಯಣಗುರು ಅಧ್ಯಯನ ಕೇಂದ್ರ ಸ್ಥಾಪನೆ, ಮೂರ್ತೆದಾರರ ಸಹಕಾರಿ ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸಲು ವ್ಯವಸ್ಥಿತ ಯೋಜನೆಯ ಬಗ್ಗೆ ಮುಖ್ಯಮಂತ್ರಿಯವರಲ್ಲಿ  ಪ್ರಸ್ತಾವ ಮಾಡುತ್ತೇನೆ' ಎಂದು ಯುವಜನಾ ಸೇವಾ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಲ್ಕಿಯ ಬಿಲ್ಲವ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಭಾನುವಾರ ನಡೆದ 11ನೇ ವರ್ಷದ `ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಕುಬೆವೂರು ಅಧ್ಯಕ್ಷತೆ ವಹಿಸಿದ್ದರು.

ಧಾರ್ಮಿಕ ವಿದ್ವಾಂಸ ಕೊಲಕಾಡಿ ವಾದಿರಾಜ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ, ತುಳುನಾಡಿನ ಆಷಾಡ ದಿನದಲ್ಲಿನ  ಸಂಸ್ಕೃತಿ, ಸಂಸ್ಕಾರದ ಆಚರಣೆಯಲ್ಲಿ ವಿವಿಧ ಪಂಗಡದಲ್ಲಿ ವೈವಿಧ್ಯ ಇದ್ದರೂ ಅದರಲ್ಲಿ ವೈಜ್ಞಾನಿಕತೆಯ ಮೂಲ ಅಡಗಿದೆ ಎಂದರು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಅವರನ್ನು ಆಟಿದ ತಮ್ಮನದ ಪ್ರಯುಕ್ತ ಸನ್ಮಾನಿಸಲಾಯಿತು.

ಐದು ತಲೆಮಾರಿನ ಹೆಜಮಾಡಿಯ ರುಕ್ಕು, ಶಾರದಾ, ಪುಷ್ಪ, ಸರಿತಾ, ಶ್ರಾವ್ಯ ಅವರನ್ನು ಗೌರವಿಸಲಾಯಿತು. ಪದರಂಗಿತವನ್ನು ಚಿತ್ರಾ ಸುವರ್ಣ, ಮೋಹನ್ ಚೆನ್ನೈ, ಸುಗಂಧಿ ಸತೀಶ್ ನಡೆಸಿಕೊಟ್ಟರು. ಭರತನಾಟ್ಯವನ್ನು ಸುಧೀಂದ್ರ ಶಾಂತಿ ಕಾರ್ಕಳ ಮತ್ತು ಸುಶ್ಮಿತಾ ಸುಮೀತ್ ಪ್ರದರ್ಶಿಸಿದರು. ಕುಸಲ್ದ ಗೋಂಚಿಲ್ (ತುಳು ಹಾಸ್ಯ) ಕಾರ್ಯಕ್ರಮವನ್ನು ಚಲನಚಿತ್ರ ಕಲಾವಿದ ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಉಮೇಶ್ ಮಿಜಾರ್, ಲಕ್ಷ್ಮೀಶ ಗಂಜಿಮಠ ಮತ್ತು ತಂಡದಿಂದ ನಡೆಯಿತು.

ಆಷಾಡದ ವಿಶೇಷ ಮಾಹಿತಿಯನ್ನು ಶಿಕ್ಷಕ, ರಂಗಕರ್ಮಿ ಕೆ.ಕೆ.ಪೇಜಾವರ ನೀಡಿದರು,

ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಪ್ರಕಾಶ್ ಸುವರ್ಣ, ಕಾರ್ಯದರ್ಶಿ ರಮಾನಾಥ ಸುವರ್ಣ, ಖಜಾಂಜಿ ಗಗನ್ ಸುವರ್ಣ, ನಿರ್ದೇಶಕರಾದ ಚಿತ್ರಾ ಸುವರ್ಣ ಮತ್ತುರಮೇಶ್ ಬಂಗೇರಾ ಹಾಜರಿದ್ದರು.
ಚಂದ್ರಶೇಖರ್ ಸುವರ್ಣ, ನರೇಂದ್ರ ಕೆರೆಕಾಡು, ಉದಯ ಅಮೀನ್ ಮಟ್ಟು ಮತ್ತು ದೀಕ್ಷಾ ಸುವರ್ಣ ನಿರೂಪಿಸಿದರು.
ಸುಮಾರು ಮೂರು ಸಾವಿರ ಜನರು ಜಾನಪದ ಸೊಗಡಿನ ತಿಂಡಿ ತಿನಸಿಗೆ ಸಾಕ್ಷಿಯಾದರು.

ಬಾಳೆ ಎಲೆಯಲ್ಲಿ...
ಅರೆಪುದಡ್ಯೆ, ಚಾ, ಕಾಫಿ, ಹಪ್ಪಳ, ಕಡ್ಲೆ, ಸಾಂತಾನಿ, ಕೆರೆಂಗ್ದ ಫೂಲು, ಊಟದೊಂದಿಗೆ ಕುಕ್ಕುದ ಉಪ್ಪಡ್, ತಿಮರೆ ಚಟ್ನಿ, ಉಪ್ಪಡ್ ಪಚ್ಚಿರ್, ತೆಕ್ಕರೆ ತಲ್ಲಿ, ಕುಡುತ್ತ ಚಟ್ನಿ, ತಜಂಕ್, ನುರ್ಗೆ ಸೊಪ್ಪು, ತೇವು ತೇಟ್ಲ, ಪದೆಂಗಿ ಗಸಿ, ತೇವು ಪದ್ಪೆ, ಬಂಬೆ ಕುಡು ಗಸಿ, ಉರ್ಪೆಲ್ ನುಪ್ಪು, ಕುಡುತ್ತಸಾರ್, ಪೆಲಕಾಯಿದ ಗಟ್ಟಿ, ಪೆಲಕಾಯಿದ ಗಾರ್ಯ, ಮೆತ್ತೆದ ಗಂಜಿ ಮೊದಲಾದ ತುಳುನಾಡಿನ ಖಾದ್ಯ ವೈವಿಧ್ಯ ಅಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.