ADVERTISEMENT

ನಿರ್ವಸಿತ ಕೊರಗ ಕುಟುಂಬಗಳಿಗೆ ಸೂರು

ಹೋರಾಟದ ಫಲವಾಗಿ ದೊರೆತ ಮನೆ: ವಸಂತ ಆಚಾರಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 10:06 IST
Last Updated 21 ಮೇ 2018, 10:06 IST

ಮಂಗಳೂರು: ಕೊರಗ ಸಮುದಾಯವು ಸಮಾಜದಲ್ಲಿಯೇ ಅತ್ಯಂತ ತಳ ಸಮುದಾಯವಾಗಿದೆ. ಮನೆ ಕಳೆದುಕೊಂಡು ಅಧೀರವಾಗಿದ್ದ ಕುಟುಂಬಗಳಿಗೆ ಸಿಪಿಎಂ–ಡಿವೈಎಫ್‌ಐ ಧೈರ್ಯ ತುಂಬಿದ್ದವು. ಅಲ್ಲದೇ ಜನಪರ ಹೋರಾಟ ನಡೆಸಿದ್ದವು. ಅದರ ಫಲವಾಗಿ 8 ಕುಟುಂಬಗಳಿಗೆ ಸೂರು ಲಭಿಸಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.

‌ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ದೆಹಲಿಯ ಆದಿವಾಸಿ ಅಧಿಕಾರ ಮಂಚ್‌ ಆಶ್ರಯದಲ್ಲಿ ನಗರದ ಹೊರವಲಯದ ಕುಲಶೇಖರ ಸಮೀಪದ ಕೋಟಿಮುರ ವಾಟರ್‌ ಟ್ಯಾಂಕ್ ಬಳಿ ಭಾನುವಾರ ನಡೆದ ನಿರ್ವಸಿತ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಕರು, ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಅನೇಕ ಸಮುದಾಯದ ಪರವಾಗಿ ಸಿಪಿಎಂ–ಡಿವೈಎಫ್‌ಐ ಹಗಲಿರುಳು ಹೋರಾಟ ನಡೆಸಿವೆ. ಆದರೆ, ಆ ಸಮುದಾಯ ಇಂದು ನಮ್ಮ ಕೈಬಿಟ್ಟಿರುವುದು ಬೇಸರದ ಸಂಗತಿ ಎಂದು ಹೇಳಿದರು.

ADVERTISEMENT

ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೋ ಮಾತನಾಡಿ, ಊಟ, ಬಟ್ಟೆ ಇಲ್ಲದಿದ್ದರೂ, ಮನುಷ್ಯ ಕಷ್ಟಪಟ್ಟು ಸಂಪಾದಿಸಬಹುದು. ಆದರೆ, ಸ್ವಂತ ಮನೆ ನಿರ್ಮಾಣ ಮಾಡುವುದು ಸುಲಭವಲ್ಲ. ಇಂತಹ ಸಂದರ್ಭದಲ್ಲಿ ನಿರ್ವಸಿತ ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮನೆ ನಿರ್ಮಾಣ ಸಮಿತಿ ಅಧ್ಯಕ್ಷ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಚಿಂತಕ ಸೀತಾರಾಮ ಎಸ್., ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹ ಸಂಚಾಲಕ ಎಸ್‌.ವೈ. ಗುರುಶಾಂತ್‌, ಸಂಚಾಲಕ ವೈ.ಕೆ. ಗಣೇಶ್‌, ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್‌, ವಾಸುದೇವ್‌ ಉಚ್ಚಿಲ್‌, ತಿಮ್ಮಯ್ಯ ಕೆ., ಸುನೀಲ್‌ಕುಮಾರ್ ಬಜಾಲ್‌ ಪಾಲ್ಗೊಂಡಿದ್ದರು.

₹3.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ

2009ರಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ನಂತೂರಿನ ಹೈಪಾಯಿಂಟ್‌ನಲ್ಲಿ 8 ಆದಿವಾಸಿ ಕೊರಗ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಭೂಮಿ ಮತ್ತು ಮನೆ ಕಳೆದುಕೊಂಡ 8 ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿದ್ದವು.

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ ಹಾಗೂ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಸಿಪಿಎಂ–ಡಿವೈಎಫ್‌ಐ ಹೋರಾಟ ಮಾಡಿದ್ದವು. ಅದರ ಫಲವಾಗಿ ಇದೀಗ 8 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಆಕರ್ಷಕ, ಆಧುನಿಕ ಅವಶ್ಯಕತೆಗಳೊಂದಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರತಿ ಮನೆಗೆ ₹3 ಲಕ್ಷ ಸಹಾಯಧನ ದೊರೆತಿದ್ದು, ದಾನಿಗಳು ಮತ್ತು ಫಲಾನುಭವಿಗಳ ಜಂಟಿ ಸಹಕಾರದೊಂದಿಗೆ ₹3.5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ಆದಿವಾಸಿ ಮನೆ ನಿರ್ಮಾಣ ಸಮಿತಿಯು ನಿರ್ಮಿಸಿದೆ.

**
ಕೃಷಿಕರು, ಅಲ್ಪಸಂಖ್ಯಾತರು ಸೇರಿದಂತೆ ಅನೇಕ ಸಮುದಾಯದ ಪರವಾಗಿ ಸಿಪಿಎಂ–ಡಿವೈಎಫ್‌ಐ ಹಗಲಿರುಳು ಹೋರಾಟ ನಡೆಸಿದ್ದು, ಇನ್ನೂ ಮುಂದುವರಿಸಲಿದೆ
– ವಸಂತ ಆಚಾರಿ, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.