ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಡಾ.ಕೆ.ಭೈರಪ್ಪ ಅವರು ಗುರುವಾರ ಪ್ರಭಾರ ಕುಲಪತಿ ಡಾ.ಎಚ್.ನಾಗಲಿಂಗಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಕೆ.ಭೈರಪ್ಪ ಅವರು, ‘ಮಂಗಳೂರು ವಿವಿ ಕರ್ನಾಟಕದಲ್ಲಿ ಉತ್ತಮ ಹೆಸರು ಪಡೆದಿದೆ. ಈ ವಿಶ್ವವಿದ್ಯಾಲಯ ಕೇವಲ ಕರ್ನಾಟಕ ಮಾತ್ರವಲ್ಲ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ನನ್ನ
ಮುಖ್ಯ ಗುರಿ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆ ಪುಣ್ಯ ಕ್ಷೇತ್ರಗಳಿಗೆ ಪ್ರಸಿದ್ಧವಾದ ಜಿಲ್ಲೆ. ಇಲ್ಲಿ ಹಲವು ಶ್ರೇಷ್ಠ ಪುಣ್ಯ ಕ್ಷೇತ್ರಗಳಿದೆ. ಲಕ್ಷಾಂತರ ಜನ ಈ ಜಿಲ್ಲೆಗೆ ಬರುತ್ತಿರುತ್ತಾರೆ. ಅದೇ ರೀತಿ ಇದೂ ಒಂದು ಪುಣ್ಯ ಕ್ಷೇತ್ರದಂತೆ ಆಗಬೇಕು. ಮಂಗಳೂರು ವಿವಿ ಟೆಂಪಲ್ ಆಫ್ ನಾಲೆಜ್ ಆಗಬೇಕು’ ಎಂದು ಹೇಳಿದರು.
‘ಮಂಗಳೂರು ವಿವಿಯನ್ನು ಉನ್ನತ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ವಿವಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 9 ವರ್ಷಗಳ ಕಾಲ ಆಡಳಿತ ನಡೆಸಿದ ಅನುಭವದಿಂದ ಸಾಕಷ್ಟು ಕಲಿತಿದ್ದೇನೆ. ಎಲ್ಲ ವಿವಿಗಳಿಗೂ ಅನುದಾನ ಕೊರತೆ ಇರುವುದು ಸಹಜ. ಅದಕ್ಕಾಗಿ ಸರ್ಕಾರವನ್ನು ಮಾತ್ರ ಅವಲಂಬಿಸದೆ ಹಣದ ಕೊರತೆ ನೀಗಿಸುವ ಸಲುವಾಗಿ ಸ್ಥಳೀಯರ ಸಹಾಯ ಪಡೆಯುತ್ತೇನೆ.
ಅವರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂಬ ಗುರಿ ಇದೆ. ಅದಕ್ಕಾಗಿ ಆಡಳಿತ ವರ್ಗ, ಅಧ್ಯಾಪಕ ವರ್ಗ, ವಿದ್ಯಾರ್ಥಿ ವರ್ಗ ಸೇರಿಸಿಕೊಂಡು ಸಂಸ್ಥೆಯನ್ನು ಬೆಳೆಸಲು ಪ್ರಯತ್ನಿಸಿದರೆ ಇನ್ನೂ ಚೆನ್ನಾಗಿ ಬೆಳೆಸಬಹುದು ಎಂಬ ನಂಬಿಕೆ ನನಗಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಪಡೆಯಲು ಪ್ರಯತ್ನಿಸುತ್ತೇನೆ’ ಎಂದರು.
ವಿವಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ನಾರಾಯಣ, ಹಣಕಾಸು ಅಧಿಕಾರಿ ಪ್ರೊ.ಬಿ.ಫಕೀರಪ್ಪ, ಉಪ ಕುಲಸಚಿವರಾದ ಪ್ರಭಾಕರ ನೀರುಮಾರ್ಗ ಹಾಗೂ ಡಾ.ಸಂಗಪ್ಪ, ವಿವಿ ನಿಕಾಯದ ಡೀನ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.