ADVERTISEMENT

ನೆಲ್ಯಾಡಿ: ಲೋಕಾಯುಕ್ತ ಅಧಿಕಾರಿ ತನಿಖೆ ಆರಂಭ

ಅರಸಿನಮಕ್ಕಿ: ಕಾಮಗಾರಿಯಲ್ಲಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 10:41 IST
Last Updated 13 ಸೆಪ್ಟೆಂಬರ್ 2013, 10:41 IST

ನೆಲ್ಯಾಡಿ (ಉಪ್ಪಿನಂಗಡಿ): ಅರಸಿನಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರೆಖ್ಯಾ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ನಡೆಯದೆ ಸುಮಾರು 50 ಲಕ್ಷ ರೂಪಾಯಿ ದುರ್ಬಳಕೆ ಆಗಿದ್ದು, ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಕಾಮಗಾರಿ ನಡೆದಿರುವ ರೆಖ್ಯ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿತು.

ನೇಲ್ಯಡ್ಕ ಪ್ರೌಢ ಶಾಲಾ ಬಳಿಯ ನೀರಿನ ಟ್ಯಾಂಕ್ ಸಮರ್ಪಕವಾಗಿ ಆಗಿರುವುದಿಲ್ಲ ಮತ್ತು ಮುಚ್ಚಿರಡ್ಕ ಎಂಬಲ್ಲಿಗೆ ವಿಸ್ತರಣೆಯಾದ ಪೈಪ್‌ಲೈನ್‌ಗೆ 7.5 ಲಕ್ಷ ರೂಪಾಯಿ ನಿಗದಿಪಡಿಸಿ 3 ಸಾವಿರ ಮೀಟರ್ ಮೇಲ್ಪಟ್ಟು ಕಾಮಗಾರಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ಕೇವಲ 500 ಮೀಟರ್ ದೂರ ಮಾತ್ರ ಪೈಪ್ ಹಾಕಲಾಗಿದೆ ಹಾಗೂ ಇತರ ಹಲವು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರಾದ ಪ್ರಕಾಶ್ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ನೇಲ್ಯಡ್ಕ ಶಾಲಾ ಬಳಿಯ ನೀರಿನ ಟ್ಯಾಂಕ್‌ನಿಂದ ಸ್ಥಳೀಯ ಪ್ರತಿಷ್ಠಿತ ವ್ಯಕ್ತಿಯೋರ್ವರ ತೋಟಕ್ಕೆ ನೀರು ಸರಬರಾಜು ಆಗುತ್ತಿದೆ, ಆದರೆ ಪಂಚಾಯಿತಿಯಿಂದ ಪ್ರತೀ ತಿಂಗಳು 6 ಸಾವಿರ ರೂಪಾಯಿ ವಿದ್ಯುತ್ ಬಿಲ್ ಪಾವತಿ ಆಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಅವ್ಯವಹಾರದ ಸಲುವಾಗಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಇಲ್ಲಿನ ಶಾಲೆಗೆ ನೀರಿನ ಅಗತ್ಯವನ್ನು ಮನಗಂಡು ಶಾಲೆಯನ್ನು ಹೊರತು ಪಡಿಸಿ ಉಳಿದ ಪೈಪ್‌ಲೈನ್ ಸಂಪರ್ಕವನ್ನು ಕಡಿತಗೊಳಿಸಲಾಯಿತು.

ರಸ್ತೆ, ಚರಂಡಿಯಲ್ಲಿ ಪೈಪ್‌ಲೈನ್:
ಇಲ್ಲಿ ಮಾಡಿರುವ ಕಾಮಗಾರಿಯಲ್ಲಿ ನೀರಿನ ಪೈಪ್‌ಲೈನ್ ಮಾಡುವಾಗ ನಿರ್ದಿಷ್ಠ ಜಾಗದಲ್ಲಿ ಮಾಡದೆ ರಸ್ತೆ ಬದಿಯ ನೀರು ಹರಿದು ಹೋಗುವ ಚರಂಡಿಯಲ್ಲಿ ಪೈಪ್ ಹಾಕಿ ಮೇಲೆ ಒಂದಷ್ಟು ಮಣ್ಣು ತುಂಬಿದ್ದಾರೆ. ಮಳೆಗೆ ನೀರು ಹರಿದು ಪೈಪ್ ಮೇಲೆ ಎದ್ದಿದೆ. ಹಾಗೂ ಪೈಪ್‌ಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ಗ್ರೇಡ್ ಪೈಪ್‌ಗಳನ್ನು ಹಾಕದೆ ಕಳಪೆ ಗುಣಮಟ್ಟದ ಪೈಪ್ ಹಾಕಲಾಗಿದೆ ಎಂಬ ದೂರು ಸ್ಥಳದಲ್ಲಿ ವ್ಯಕ್ತವಾಯಿತು.

ಲೋಕಾಯುಕ್ತ ಅಧಿಕಾರಿ ಸುಬ್ರಹ್ಮಣ್ಯ ಕಾರಂತ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅರಸಿನಮಕ್ಕಿ ಗ್ರಾಪಂ. ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿಪಂ. ಎಂಜಿನಿಯರ್ ತಿಪ್ಪೇಸ್ವಾಮಿ, ಗ್ರಾಪಂ. ಅಭಿವೃದ್ದಿ ಅಧಿಕಾರಿ ವೆಂಕಪ್ಪ ತನಿಖೆ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.