ADVERTISEMENT

ಪಕ್ಕದ ಖಾಸಗಿ ಕೃಷಿ ಭೂಮಿಗೆ ಅಪಾರ ಹಾನಿ

ಕೊಚ್ಚಿಹೋಗಿದೆ ಕಿಂಡಿ ಅಣೆಕಟ್ಟೆಯ ಸಂಪರ್ಕ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:52 IST
Last Updated 6 ಡಿಸೆಂಬರ್ 2012, 6:52 IST

ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮದ ಕುರಿಂಜ ಮತ್ತು ಬಡಗನ್ನೂರು ಗ್ರಾಮದ ಪಟ್ಟೆ ನೆಕ್ಕರೆ ಮಧ್ಯೆ  ಸಂಪರ್ಕ ಕಲ್ಪಿಸುತ್ತಿದ್ದ ಕುರಿಂಜ ಹೊಸಮನೆ ಎಂಬಲ್ಲಿ ಕಿಂಡಿ ಆಣೆಕಟ್ಟಿನ ಒಂದು ಬದಿಯ ಮಣ್ಣು ಸಂಪೂರ್ಣವಾ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ಕಡಿತಗೊಂಡು  10 ವರ್ಷ ಕಳೆದರೂ ಸಂಬಂಧಪಟ್ಟವರು ಗಮನ ಹರಿಸಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. 

ಅರಿಯಡ್ಕ ಗ್ರಾಮದ ಕುರಿಂಜ ಮತ್ತು ಬಡಗನ್ನೂರು ಗ್ರಾಮದ ಪಟ್ಟೆ ನಿಕ್ಕಿಲು ನಡುವೆ ನೇರ ಸಂಪರ್ಕ ಕಲ್ಪಿಸುವ  ಉದ್ದೇಶದಿಂದ ಮತ್ತು ಈ ಭಾಗದಲ್ಲಿ ನೀರಿಂಗಿಸುವ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕುರಿಂಜ ಹೊಸಮನೆ ಎಂಬಲ್ಲಿ ಹರಿಯುವ ತೋಡಿಗೆ ಈ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ ಸಂಪೂರ್ಣ ತಡೆಗೋಡೆ ನಿರ್ಮಿಸದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟಿನ ಒಂದು ಬದಿಯ ಮಣ್ಣು ಸವೆತಗೊಂಡು ಅಣೆಕಟ್ಟಿನ ಸಂಪರ್ಕ ಕಡಿತಗೊಂಡಿತ್ತು.

ಈ ಅಣೆಕಟ್ಟು ಕುರಿಂಜ ಹೊಸಮನೆ ಲಕ್ಷ್ಮಿ ಎಂಬವರ ಕೃಷಿ ಭೂಮಿಗೆ ಹೊಂದಿಕೊಂಡಿದೆ. ಕಿಂಡಿ ಅಣೆಕಟ್ಟಿನ ಕೊರೆತಕ್ಕೊಳಗಾದ ಭಾಗದಲ್ಲಿದ್ದ ಲಕ್ಷ್ಮೀ ಅವರಿಗೆ ಸೇರಿದ ಸುಮಾರು 50 ಅಡಿಕೆ ಮರ ಮತ್ತು 10 ತೆಂಗಿನ ಗಿಡ ಪ್ರವಾಹಕ್ಕೀಡಾಗಿ ಉರುಳಿ ಬಿದ್ದಿವೆ. ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಮಣ್ಣಿನ ಕೊರೆತ ಜಾಸ್ತಿಯಾಗುತ್ತಿದ್ದು , ಅವರ ಜಾಗದ ಮಣ್ಣು ಕೊಚ್ಚಿಕೊಂಡು ಹೋಗಿ ತೋಡು ಪಾಲಾಗುತ್ತಿದೆ. ಇದರಿಂದಾಗಿ ಅವರು ನಷ್ಟ ಅನುಭವಿಸುವಂತಾಗಿದೆ.  

ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋದ ಪರಿಣಾಮ ಮಳೆಗಾಲದಲ್ಲಿ ಈ ಭಾಗದ ನೇರ  ನಡುವೆ ಸಂಪರ್ಕ ಕಡಿದುಹೋಗುತ್ತಿದೆ. ಇದರಿಂದಾಗಿ ಶಾಲಾ ಮಕ್ಕಳು ಸುತ್ತು ಬಳಸಿ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. 

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಈ ಹಿಂದೆ ಪುತ್ತೂರು ಶಾಸಕರಾಗಿದ್ದಾಗ ಈ ಸಮಸ್ಯೆಯ ಕುರಿತು ಸ್ಥಳೀಯರು ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮನವಿ ನೀಡಿ ಸಾಕಾಗಿದೆ ಎಂದು ಸ್ಥಳೀಯರಾದ ಹೊನ್ನಪ್ಪ ಗೌಡ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.