ADVERTISEMENT

ಪಡಿತರ ಚೀಟಿ ಸಮಸ್ಯೆ ಗೊಂದಲ-ತರಾಟೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 9:05 IST
Last Updated 27 ಫೆಬ್ರುವರಿ 2011, 9:05 IST

ಮಂಗಳೂರು: ಎಪಿಎಲ್ ಮತು ಬಿಪಿಎಲ್ ಪಡಿತರ ಚೀಟಿಯಲ್ಲಿ ಹೆಸರು ಸೇರಿಸಲು ಅಥವಾ ಬದಲಿಸಲು ತೊಂದರೆಯಾಗುತ್ತಿದೆ. ಕಂದಾಯ ಇಲಾಖೆ, ನೆಮ್ಮದಿ ಕೇಂದ್ರ, ತಾಲ್ಲೂಕು ಕಚೇರಿಯಲ್ಲಿ ಏನೂ ಆಗುತ್ತಿಲ್ಲ. ಪಡಿತರ ಚೀಟಿಗೆ ಸಂಬಂಧಿಸಿ ಸ್ಪಷ್ಟ ಉತ್ತರ ನೀಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಶನಿವಾರ ನಡೆದ ಈ ಸಭೆಯಲ್ಲಿ ಸದಸ್ಯರಾದ ಎಂ.ಎಸ್.ಮಹಮದ್ ಮತ್ತು ಮಮತಾ ಗಟ್ಟಿ ಈ ಬಗ್ಗೆ ಪ್ರಸ್ತಾಪಿಸಿದರು. ಪಡಿತರ ಚೀಟಿ ಹೆಸರು ಸೇರಿಸಲು, ತಿದ್ದುಪಡಿ ಮಾಡಲು ಸಮಸ್ಯೆ ಆಗಿದೆ ಎಂದು ಗ್ರಾಮಸಭೆಗಳಲ್ಲಿ ಜನರು ನೇರವಾಗಿ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ. ಜನರಿಗೆ ಭ್ರಮನಿರಸನವಾಗುತ್ತಿದೆ ಎಂದು ಮಹಮದ್ ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ವೃಷಭರಾಜೇಂದ್ರ ಮೂರ್ತಿ ಉತ್ತರಿಸಿ, ಈ ಹಿಂದೆ ಪಡಿತರ ಚೀಟಿ ವಿತರಣೆಯ ವ್ಯವಸ್ಥೆ ಹೊತ್ತಿದ್ದ ಕೊಮ್ಯಾಟ್ ಟೆಕ್ನಾಲಜಿ ಸಂಸ್ಥೆ ಸರಿಯಾಗಿ ಕೆಲಸ ಮಾಡದ ಕಾರಣ ಸಂಸ್ಥೆಯನ್ನೇ ಸರ್ಕಾರ ಬದಲಿಸಿದೆ. ಪ್ರಸ್ತುತ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚತಂತ್ರ ದತ್ತಾಂಶದ ಮೂಲಕ ಪ್ರತಿ ಕುಟುಂಬಕ್ಕೂ, ಪ್ರತಿ ಕಾರ್ಡ್‌ಗೂ ತಾಳೆ ಮಾಡುವ ಕೆಲಸ ಪ್ರಗತಿಯಲ್ಲಿದೆ. 199 ಗ್ರಾಮಗಳ 30,000 ಪಡಿತರ ಚೀಟಿಗಳ ವಿವರ ದಾಖಲಿಸಲಾಗಿದೆ. ಇನ್ನೂ 9 ಸಾವಿರ ಚೀಟಿಗಳ ವಿವರ ದಾಖಲಿಸಬೇಕಾಗಿದೆ. ಇದಕ್ಕಾಗಿ 28ರವರೆಗೆ ಗಡುವು ನೀಡಲಾಗಿದೆ. ನಗರ ಪ್ರದೇಶದ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ವಿವರ ನೀಡಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದಿನ ತಿಂಗಳಲ್ಲಿ ಪ್ರತಿ ತಾಲ್ಲೂಕು ಕಚೇರಿಗಳಲ್ಲಿ ಹೆಸರು ತೆಗೆಸಲು, ಸೇರಿಸಲು ವಿಭಾಗ ತೆರೆಯಲಾಗುವುದು ಎಂದರು.ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಮೂಲಿ ಕೆಲಸದ ಜತೆಗೆ ಬೇರೆ ಇಲಾಖೆಗಳ ಹೆಚ್ಚುವರಿ ಕೆಲಸ ನೀಡಿ ಶೋಷಣೆ ನಡೆಸಲಾಗುತ್ತಿದೆ ಎಂದು ಸದಸ್ಯ ಕೇಶವಗೌಡ ಬಜತ್ತೂರು ದೂರಿದರು.

ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಬೇರೆ ಇಲಾಖೆಗಳ ಹೆಚ್ಚುವರಿ ಕೆಲಸ ನೀಡದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ ಜನವರಿಯಲ್ಲಿ ಸುತ್ತೋಲೆ ಕಳುಹಿಸಿದೆ.ಆದರೆ ಸ್ಥಳೀಯವಾಗಿ ಅವರನ್ನು ಬೇರೆ ಕೆಲಸಗಳಿಗೆ ಕಳುಹಿಸುವಂತೆ ಒತ್ತಡವಿರುತ್ತದೆ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂದು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶಕುಂತಲಾ ತಿಳಿಸಿದರು.

ಆದರೆ ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು, ಕೆಲಸದ ಚೌಕಟ್ಟು ವಿಧಿಸುವುದು ಸರಿಯಲ್ಲ. ಪಲ್ಸ್ ಪೋಲಿಯೊ, ಜನಗಣತಿ ಮೊದಲಾದ ಕಾರ್ಯಗಳಿಗೆ ಬೇರೆ ಇಲಾಖೆಯವರನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಶಿವಶಂಕರ್ ಸ್ಪಷ್ಟಪಡಿಸಿದರು.ಅಂಗನವಾಡಿ ಸಮಸ್ಯೆ: ಅಂಗನವಾಡಿಗಳನ್ನು ಸಂಜೆ 4 ಗಂಟೆವರೆಗೆ ತೆರೆಯುವಂತೆ ಸರ್ಕಾರ ಸೂಚಿಸಿದೆ.ಆದರೆ ಈಗಿನ ಪೌಷ್ಠಿಕ ಆಹಾರದ ಬಲದಿಂದ ಮಕ್ಕಳನ್ನು ಸಂಜೆ 4 ಗಂಟೆಯವರೆಗೆ ಇರಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಪರಿಹಾರೋಪಾಯ ಕಂಡುಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರ ಸಂಘ, ಕನಿಷ್ಠ ವೇತನ ಹೆಚ್ಚಿಸುವಂತೆ ಮತ್ತು ಮಕ್ಕಳಿಗೆ ಆಹಾರದ ಪ್ರಮಾಣ ಹೆಚ್ಚಿಸುವಂತೆ ಮನವಿ ಸಲ್ಲಿಸಿದೆ’ ಎಂದು ಶಕುಂತಲಾ ಸಭೆಯ ಗಮನಕ್ಕೆ ತಂದರು.ಈಗ ಮಕ್ಕಳಿಗೆ ಬಿಸಿಬೇಳೆ ಬಾತ್ ಪೂರೈಸಲಾಗುತ್ತಿದೆ.ಆದರೆ ಅದು ಸಂಜೆಯವರೆಗೆ ಸಾಲುವುದಿಲ್ಲ. ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸಬೇಕುವಂತೆ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸೋಣ ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.