ಸುರತ್ಕಲ್: ಕೈಗಾರಿಕೀಕರಣ ಹಾಗೂ ಕಾಂಕ್ರೀಟಿಕರಣದಿಂದ ಮರಗಳ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸಿ ಪೋಷಿಸಲು ಸಂಘ ಸಂಸ್ಥೆಗಳು ಆಸಕ್ತಿ ವಹಿಸಿದರೆ ಪಾಲಿಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಮೇಯರ್ ಪ್ರವೀಣ್ ಭರವಸೆ ನೀಡಿದರು.
ಭಾನುವಾರ ಪಣಂಬೂರು ಕಡಲ ಕಿನಾರೆಯಲ್ಲಿ ಪ್ಲಾಂಟ್ ಸಂಸ್ಥೆ ಆಯೋಜಿಸಿದ್ದ ನಮ್ಮೂರ ಹಬ್ಬ, ಅಶ್ವಥ್ ಭಾವ ನಮನ, ನಗೆ ಹಬ್ಬ, ವನಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಾಂಕ್ರೀಟಿಕರಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಮರಗಳನ್ನು ಕಡಿಯಬೇಕಾಗಿ ಬಂತು. ಈಗ ಪಾಲಿಕೆ ಒಂದು ಮರಕ್ಕೆ ಪರ್ಯಾಯವಾಗಿ ಮೂರು ಸಸಿಗಳನ್ನು ನೆಡಲು ಕ್ರಮಕೈಗೊಂಡಿದೆ ಎಂದರು.ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನಕಳಿಯ, ಪರಿಸರ ಜಾಗೃತಿ ವೇದಿಕೆಯ ಶಿವಪ್ರಸಾದ್, ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರಿನ ವಿನಯ್ ಮತ್ತು ತಂಡದಿಂದ ಸಿ.ಅಶ್ವಥ್ ನುಡಿನಮನ ಗಾಯನ ನಡೆಯಿತು. ಪಟ್ಟಾಭಿರಾಮ ಸುಳ್ಯ ಅವರ ನಗೆ ಹಬ್ಬ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.