ADVERTISEMENT

ಪುತ್ತೂರಿಗೆ ಇನ್ನಷ್ಟು ರಿಕ್ಷಾ ಬೇಡ: ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 9:55 IST
Last Updated 20 ಫೆಬ್ರುವರಿ 2012, 9:55 IST

ಪುತ್ತೂರು: ಬೆಳೆಯುತ್ತಿರುವ ಪುತ್ತೂರಿಗೆ  ಸಿಟಿ ಬಸ್ ವ್ಯವಸ್ಥೆ ಬರುವ ಸಾಧ್ಯತೆ ಇರುವುದರಿಂದ ಮತ್ತು ಇಲ್ಲಿ ರಿಕ್ಷಾಗಳ ಸಂಖ್ಯೆ ಈಗಾಗಲೇ ಅತಿಯಾಗಿರುವುದರಿಂದ `ಪುತ್ತೂರಿಗೆ ಇನ್ನು ರಿಕ್ಷಾ ಸಾಕು~ ಎನ್ನುವುದು ನಮ್ಮ ಮುಂದಿನ ಹೋರಾಟ ಎಂದು ಕರ್ನಾಟಕ ರಿಕ್ಷಾ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿ.ಪುರಂದರ ಭಟ್ ಹೇಳಿದರು.
ಪುತ್ತೂರಿನ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಪುತ್ತೂರಿನಲ್ಲಿ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ರಿಕ್ಷಾಗಳಿರುವುದರಿಂದ ಮುಂದೆ ರಿಕ್ಷಾವನ್ನೇ ನಂಬಿ ಜೀವನ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯ ಎಂದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ರಿಕ್ಷಾಗಳಿಗೆ ಪರವಾನಿಗೆ ನೀಡಿದಲ್ಲಿ ರಿಕ್ಷವನ್ನೇ ನಂಬಿ ದುಡಿದು ಬದುಕುತ್ತಿರುವವರಿಗೆ ಸಮಸ್ಯೆಗಳಾಗುವುದು ಖಂಡಿತ ಎಂದರು.

ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘದ ಪ್ರಯತ್ನಕ್ಕೆ ಫಲ ದೊರಕಿದೆ ಎನ್ನುವುದಕ್ಕೆ ಅಸಂಘಟಿತ ರಿಕ್ಷಾ ಚಾಲಕರಿಗೆ ಸರ್ಕಾರದ ಬಜೆಟ್‌ನಲ್ಲಿ ಜಾರಿಗೊಳ್ಳಲಿರುವ ಅಪಘಾತ ವಿಮಾ ಯೋಜನೆಯೇ ಸಾಕ್ಷಿ ಎಂದ ಅವರು, ಕಾಲೆಳೆಯುವ ತಂತ್ರಕ್ಕೆ ಬಲಿ ಬೀಳದೆ ನಾವು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು.

ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಯು.ಲೋಕೇಶ್ ಹೆಗ್ಡೆ ಮಾತನಾಡಿ, ನಮ್ಮ ಹೋರಾಟ ಏನಿದ್ದರೂ ರಿಕ್ಷಾ ಚಾಲಕ ಮಾಲಕರ ಯೋಗಕ್ಷೇಮಕ್ಕಾಗಿಯೇ ಎಂದರು.  ರಿಕ್ಷಾ ಚಾಲಕರಿಗೆ  ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ರಾಜಕೀಯವಿಲ್ಲದೆ ಒಟ್ಟಾಗಿ ಹೋರಾಟ ನಡೆಸಲು ನಮ್ಮಂದಿಗೆ ಸಹಕರಿಸಿ ಎಂದು ಅವರು ಬಿಎಂಎಸ್, ಸ್ನೇಹಸಂಗಮ ಮತ್ತು ಸಿಐಟಿಯು ಬೆಂಬಲಿತ ರಿಕ್ಷಾ ಚಾಲಕ ಮಾಲಕರ ಸಂಘಟನೆಗಳಿಗೆ ಮನವಿ ಮಾಡಿದರು.

ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಿರೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಜಯರಾಮ ಕುಲಾಲ್ , ಸಂಘದ ನೂತನ ಅಧ್ಯಕ್ಷ ಅಬ್ದುಲ್ ಜಲೀಲ್, ನೂತನ ಪ್ರಧಾನ ಕಾರ್ಯದರ್ಶಿ ಸೇಸಪ್ಪ ನಾಯ್ಕ,  ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪೌಲ್ ಡಿ~ಸೋಜಾ, ರಿಕ್ಷಾ ಸಂಘಟನೆಯ ಪದಾಧಿಕಾರಿಗಳಾದ ತಿಮ್ಮಪ್ಪ ಗೌಡ , ಮಹೇಶ್ ಭಟ್ ,ಇಸುಬು ಕೂರ್ನಡ್ಕ, ಯೋಗೀಶ್ ಆಚಾರ್ಯ, ನಾರಾಯಣ ಗೌಡ , ಕೃಷ್ಣಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.