ADVERTISEMENT

ಪುತ್ತೂರು-ಉಪ್ಪಿನಂಗಡಿ ರಸ್ತೆ ಸಂಚಾರಕ್ಕೆ ತಡೆ

ರಸ್ತೆಗುರುಳಿದ ಮರ, ವಿದ್ಯುತ್ ಕಂಬಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 5:01 IST
Last Updated 11 ಜೂನ್ 2018, 5:01 IST

ಪುತ್ತೂರು: ಮೂರು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಭಾನುವಾರ ಬೆಳಿಗ್ಗೆ ಪುತ್ತೂರು ನಗರದ ಹೊರವಲಯದ ಕೋಡಿಂಬಾಡಿ ಬಳಿ ರಸ್ತೆ ಬದಿ ಮಣ್ಣು ಕುಸಿತಕ್ಕೊಳಗಾಗಿ ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿವೆ.

ಪರಿಣಾಮ ಪುತ್ತೂರು-ಉಪ್ಪಿನಂಗಡಿ ನಡುವಿನ ರಸ್ತೆ ಸಂಚಾರ ಹಾಗೂ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಧರೆಗುರುಳಿದ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಮಧ್ಯಾಹ್ನದ ಬಳಿಕ ರಸ್ತೆ ಸಂಚಾರ ಸುಗಮಗೊಳಿಸುವ ಕಾರ್ಯ ನಡೆಯಿತು.

ಕೋಡಿಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ, ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿಯಲ್ಲಿದ್ದ ಮರವೊಂದು ರಸ್ತೆ ಬದಿಯ ಮಣ್ಣು ಕುಸಿತದ ಪರಿಣಾಮ ಬುಡಸಮೇತ ಎದ್ದು ರಸ್ತೆ ಬದಿಯಲ್ಲಿ ಹಾದು ಹೋಗುವ ಎಚ್‌ಪಿ ವಿದ್ಯುತ್ ಲೈನ್‌ ಮೇಲೆ ಬಿದ್ದು, ರಸ್ತೆಗೆ ಅಡ್ಡವಾಗಿ ನೆಲಕ್ಕುರುಳಿದೆ.

ADVERTISEMENT

ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ಈ ಭಾಗದಲ್ಲಿದ್ದ 3 ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿವೆ. 4 ವಿದ್ಯುತ್ ಕಂಬಗಳು ರಸ್ತೆಗೆ ವಾಲಿ ನಿಂತಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ತಂತಿ ರಸ್ತೆ ಮೇಲೆಯೇ ಬಿದ್ದಿವೆ. ಈ ಘಟನೆಯಿಂದಾಗಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಸಂಚಾರ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದೆ.

ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯ ಕಾರ್ಯಾಚರಣೆ ನಡೆಸಿ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಮಧ್ಯಾಹ್ನದ ಬಳಿಕ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ. ಉರುಳಿ ಬಿದ್ದ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಜೋಡಣೆ ಮಾಡುವ ಕಾರ್ಯವೂ ಭರದಿಂದ ನಡೆದಿದೆ.

ವಾಹನ ಚಾಲಕರು ಪುತ್ತೂರಿನಿಂದ ಮಾಣಿಯಾಗಿ ಉಪ್ಪಿನಂಗಡಿಗೆ ತೆರಳಬೇಕಾಯಿತು.

ತಪ್ಪಿದ ಭಾರಿ ಅಪಾಯ
ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಬಹಳಷ್ಟು ವಾಹನಗಳು ನಿತ್ಯವೂ ಓಡಾಡುತ್ತಿದ್ದು, ಬೆಳಿಗ್ಗೆ ಈ ಘಟನೆ ನಡೆದಿರುವುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ವಾಹನಕ್ಕೆ ಹಾನಿ ಮತ್ತು ಸವಾರರಿಗೆ ಅಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.