ಮಂಗಳೂರು: ದೇಶದಲ್ಲಿ ಹಲವಾರು ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆಗಳು, ಆಸ್ಪತ್ರೆಗಳು ಇವೆ. ಆದರೆ ತುರ್ತು ವೈದ್ಯಕೀಯ ಚಿಕಿತ್ಸೆ ಸಹಿತ ಇತರ ಹಲವು ಕ್ಷೇತ್ರಗಳಲ್ಲಿ ತಮ್ಮಲ್ಲಿನ ಬೋಧಕ ವರ್ಗವನ್ನು ಇನ್ನಷ್ಟು ಜ್ಞಾನವಂತರನ್ನಾಗಿ ಮಾಡಲು ಅವುಗಳು ಮುಂದಾಗುತ್ತಿಲ್ಲ ಎಂದು ಅಮೆರಿಕದ ಸೌತ್ ಫ್ಲಾರಿಡಾ ವಿಶ್ವವಿದ್ಯಾಲಯದ ತುರ್ತು ವೈದ್ಯಕೀಯ ಸೇವೆ ವಿಭಾಗದ ಪ್ರೊಫೆಸರ್ ಡಾ.ಸಾಗರ್ ಗಾಲ್ವಾಂಕರ್ ವಿಷಾದಿಸಿದರು.
ಇಲ್ಲಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ `ತುರ್ತು ವೈದ್ಯಕೀಯ ಸೇವೆ~ ವಿಷಯದ ಮೇಲಿನ ಉಪನ್ಯಾಸದಲ್ಲಿ ಮಾತನಾಡಿದ ಅವರು, ತುರ್ತು ವೈದ್ಯಕೀಯ ಸೇವೆ ಎಂಬುದು ಗಾಯಾಳುವಿನ ಜೀವವನ್ನು ತಕ್ಷಣಕ್ಕೆ ಉಳಿಸುವಂತಹ ಕ್ಷೇತ್ರ, ಇಲ್ಲಿ ಕರ್ತವ್ಯ ನಿಭಾಯಿಸುವವರಿಗೆ ಹೆಚ್ಚಿನ ಕೌಶಲ, ತಾಂತ್ರಿಕ ನೈಪುಣ್ಯ ಬೇಕಾಗುತ್ತದೆ. ಇದನ್ನು ವೃದ್ಧಿಸುವ ನಿಟ್ಟಿನಲ್ಲಿ ಸಂಸ್ಥೆಗಳು ಕ್ರಮ ಕೈಗೊಳ್ಳದಿದ್ದರೆ ಇಡೀ ತುರ್ತು ಚಿಕಿತ್ಸಾ ವ್ಯವಸ್ಥೆಯೇ ಕುಸಿದುಬೀಳುವ ಸಾಧ್ಯತೆ ಇರುತ್ತದೆ ಎಂದರು.
ಮಂಗಳೂರಿನಲ್ಲಿ ಹಲವಾರು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಇದ್ದರೂ ಒಂದೇ ಒಂದು ತುರ್ತು ಚಿಕಿತ್ಸಾ ಸ್ನಾತಕೋತ್ತರ ಸೀಟು ಇಲ್ಲದಿರುವುದು ವಿಶೇಷ ಎಂದ ಅವರು, ನಮ್ಮ ಸಂಶೋಧನೆಗಳನ್ನು, ನಾವು ಮಾಡಿದ ಪ್ರಯೋಗಗಳನ್ನು ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಲೇ ಇರಬೇಕು, ಹೀಗಾದರೆ ನಾವು ಅಮೆರಿಕವನ್ನೂ ಮೀರಿ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ ಎಂದರು.
ಕಾಲೇಜಿನ ನಿರ್ದೇಶಕ ಪ್ಯಾಟ್ರಿಕ್ ರಾಡ್ರಿಗಸ್, ಆಡಳಿತಾಧಿಕಾರಿ ಡೆನ್ನಿಸ್ ಡೇಸಾ, ಡೀನ್ ಡಾ.ಜೆ.ಪಿ.ಆಳ್ವ, ಸಂಚಾಲಕ ಡಾ.ಎಚ್.ಪ್ರಭಾಕರ್, ಕಾಲೇಜಿನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಹೆಗಡೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.