ADVERTISEMENT

ಬಂಟ್ವಾಳ: ಸಾಧಾರಣ ಮಳೆ: ಕೈಕೊಡುವ ಮೆಸ್ಕಾಂ -ಉಡುಪಿ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 9:25 IST
Last Updated 6 ಜೂನ್ 2011, 9:25 IST

ಬಂಟ್ವಾಳ: ತಾಲ್ಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಪದೇ ಪದೇ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಸಿಡಿಲಿನಿಂದಾಗಿ ಅಪಾರ ನಷ್ಟ ಸಂಭವಿಸಿದೆ.ತಾಲ್ಲೂಕಿನಲ್ಲಿ ಭಾನುವಾರ 49.2 ಮಿ.ಮೀ. ಮಳೆಯಾಗಿದ್ದು, ಕೆಲವೆಡೆ ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದೆ.

ಇಲ್ಲಿನ ಪುಂಜಾಲಕಟ್ಟೆ ಸಮೀಪದ ಕುಕ್ಕಳ ಗ್ರಾಮದ ಬೆರ್ಕಳ ಎಂಬಲ್ಲಿ ದಿ.ಅಣ್ಣು ಪೂಜಾರಿ ಎಂಬವರ ಮನೆಯಲ್ಲಿ ಶನಿವಾರ ರಾತ್ರಿ ಸಿಡಿಲು ಹೊಡೆದಿದ್ದು, ಮನೆಯವರೆಲ್ಲರೂ ಆಸ್ಪತ್ರೆಗೆ ದಾಖಲಾಗಿ ವಾಪಾಸಾಗಿದ್ದಾರೆ.

ಮನೆಯೊಳಗಿನ ಎಲ್ಲಾ  ವಿದ್ಯುತ್ ಸಂಪರ್ಕ ಸುಟ್ಟು ಕರಕಲಾಗಿದ್ದು, ಟಿ.ವಿ, ಫ್ಯಾನ್, ಬಲ್ಬ್ ಮತ್ತಿತರ ಸೊತ್ತು ನಾಶವಾಗಿದೆ ಎಂದು ದೂರಿದ್ದಾರೆ. ಮನೆಯ ಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು, ನೆಲದಲ್ಲಿ ಸಿಮೆಂಟ್ ಎದ್ದು ಹೋಗಿದೆ. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ನೋಡಲು ಬಂದಿದ್ದರೆನ್ನಲಾದ ಉಜಿರೆಯ ಪದ್ಮಾವತಿ ಮತ್ತು ಬಳ್ಳಮಂಜ ವಿಮಲ, ಕಜೆಕಾರು ಅನಂತಕೃಷ್ಣ ಎಂಬವರಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಮಾತ್ರವಲ್ಲದೆ ಇಲ್ಲಿನ ನಿವಾಸಿಗಳಾದ ವಿಜಯಾ, ನಮತಾ, ಮಾಧವ, ಕುಸಮು, ಗಿರೀಶ ಎಂಬವರಿಗೂ ಸಿಡಿಲಿನ ಪ್ರಭಾವದಿಂದ ಕಂಗೆಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನೊಂದೆಡೆ ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಮುದರಬೆಟ್ಟು ಎಂಬಲ್ಲಿ ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ನಡೆದಿದ್ದ ಇಲ್ಲಿನ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಮನೆಯಲ್ಲಿಯೂ ಶನಿವಾರ ರಾತ್ರಿ ವಿದ್ಯುತ್ ತಂತಿ, ಬಲ್ಬ್, ದೇವರ ಮಂಟಪ ಮತ್ತಿತರ ಸೊತ್ತುಗಳು ಸುಟ್ಟು ಹೋಗಿದೆ.
 

ಇಲ್ಲಿನ ವಿದ್ಯುತ್ ಪರಿವರ್ತಕವನ್ನು ಮೆಸ್ಕಾಂ ಸಿಬ್ಬಂದಿ ಸುಸ್ಥಿತಿಯಲ್ಲಿ ಇಡದಿರುವುದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯ ನಿವಾಸಿ ಗುಮ್ಮಣ್ಣ ಶೆಟ್ಟಿ ಎಂಬವರ ಮನೆಯಲ್ಲಿಯೂ ಟಿ.ವಿ. ಮತ್ತು ಪಂಪ್ ಸುಟ್ಟು ಹೋಗಿದೆ ಎಂದು ದೂರಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ಚತುಷ್ಪತ, ಮೇಲ್ಸೇತುವೆ, ಮರು ಡಾಂಬರೀಕರಣ, ತೇಪೆ ಹೀಗೆ ಎಲ್ಲೆಡೆ ರಸ್ತೆ ಅಗೆದು ಹಾಕಿರುವ ಪರಿಣಾಮ ರಸ್ತೆ ಸಂಚಾರಕ್ಕೆ ಅಸಾಧ್ಯವಾಗಿದೆ. ಬಂಟ್ವಾಳ-ಮೂಡುಬಿದ್ರೆ ರಾಜ್ಯ ಹೆದ್ದಾರಿ ಸಹಿತ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ಹರಿದಾಡುತ್ತಿದೆ.

ತಾಲ್ಲೂಕಿನ ಮಾರ್ನಬೈಲು-ಬೊಳ್ಳಾಯಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತೀರಾ ಕಿರಿದಾಗಿದೆ. ಇಲ್ಲಿನ ಪ್ರಸಿದ್ಧ ಪಣೋಳಿಬೈಲು ಕಲ್ಲುರ್ಟಿ ದೈವಸ್ಥಾನ ಸಮೀಪದ ಕಾರಾಜೆ ಎಂಬಲ್ಲಿ ಕಿರಿದಾದ ಸೇತುವೆ ದಾಟುತ್ತಿದ್ದ ವೇಳೆ ಸರ್ಕಾರಿ ಬಸ್ಸೊಂದು ಭಾನುವಾರ ಸಂಜೆ ರಸ್ತೆಬದಿಗೆ ಜಾರಿ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಡುಪಿ: ತುಂತುರು ಮಳೆ
ಉಡುಪಿ: ಮುಂಗಾರು ಮಳೆ ಎರಡೇ ದಿನಗಳಲ್ಲಿ ಕ್ಷಣಿಸಿದ್ದು ಭಾನುವಾರ ಆಗಾಗ ತುಂತುರು ಮಳೆಯಾಗಿದೆ. ಜಿಲ್ಲೆಯಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿದೆ.

ಉಡುಪಿಯಲ್ಲಿ 10 ಮಿ.ಮೀ, ಕುಂದಾಪುರದಲ್ಲಿ 8.8 ಮಿ.ಮೀ ಹಾಗೂ ಕಾರ್ಕಳದಲ್ಲಿ 45.6 ಮಿ.ಮೀ ಮಳೆ ದಾಖಲಾಗಿದೆ. ಬಹುತೇಕ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇಣುಕಿದ್ದು ಸೆಕೆಯ ವಾತಾವರಣ ಮೂಡಿತ್ತು. ಮುಂಗಾರು ಮಳೆ ಭರ್ಜರಿಯಾಗಿ ಪ್ರಾರಂಭವಾಗಿದ್ದ ಸಂಭ್ರಮದಲ್ಲಿದ್ದ ರೈತರು ಮತ್ತೆ ಮಳೆಯ ನಿರೀಕ್ಷೆ ಮಾಡುವಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT