ADVERTISEMENT

ಬಂದಿದೆ ಹೊಸ ಇಡಿಎಸ್ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:50 IST
Last Updated 3 ಫೆಬ್ರುವರಿ 2011, 8:50 IST

ಮಂಗಳೂರು:  ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತಿತರ ಉದ್ದೇಶಗಳಿಗೆ ಬಳಸಲಾಗುವ ಸ್ಫೋಟಕದ ಸದ್ದು ಗಣನೀಯವಾಗಿ ಕಡಿಮೆಗೊಳಿಸುವುದರ ಜತೆಗೆ ಬೇಕಾದಷ್ಟು ಪ್ರಮಾಣದಲ್ಲೇ ಸ್ಫೋಟ ನಡೆಸಲು ಅವಕಾಶ ಕಲ್ಪಿಸುವ ಹೊಸ ತಂತ್ರಜ್ಞಾನ (ಎಲೆಕ್ಟ್ರಾನಿಕ್ ಡಿಲೆ ಸಿಸ್ಟಮ್-ಇಡಿಎಸ್) ಇದೀಗ ಭಾರತಕ್ಕೂ ಕಾಲಿಟ್ಟಿದೆ.

ಸಾಮಾನ್ಯವಾಗಿ ಉದ್ದಿಮೆಗಳಲ್ಲಿ ಸ್ಫೋಟಕ ಬಳಸುವಾಗ ಹೊರಹೊಮ್ಮುವ ದೊಡ್ಡ ಶಬ್ದ ಕಿರಿಕಿರಿ ಎನಿಸುತ್ತದೆ. ಮೇಲಾಗಿ ಒಂದು ಬಾರಿಯ ಸ್ಫೋಟಕ್ಕೆ ಎಷ್ಟು ಪ್ರಮಾಣದ ಸ್ಫೋಟಕ ತುಂಬಿಸಿಡಲಾಗುತ್ತದೆಯೋ ಅದೆಲ್ಲವೂ ಒಂದೇ ಹೊತ್ತಿಗೆ ಸ್ಫೋಟಿಸಬೇಕಾಗುತ್ತದೆ. ಆದರೆ ಹೊಸ ತಂತ್ರಜ್ಞಾನದಲ್ಲಿ ನಮಗೆ ಬೇಕಾದಷ್ಟು ಪ್ರಮಾಣದಲ್ಲಿಯೇ ಸ್ಫೋಟಕ ಬಳಸುವುದರ ಜತೆಗೇ ಶಬ್ದವನ್ನೂ ಕಡಿಮೆಗೊಳಿಸಲು ಅವಕಾಶವಿದೆ ಎಂದು ಸುರತ್ಕಲ್‌ನ ಎನ್‌ಐಟಿಕೆ ಗಣಿಗಾರಿಕೆ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ವಿ.ಆರ್.ಶಾಸ್ತ್ರಿ ತಿಳಿಸಿದರು.

ಇದೇ 18ರಿಂದ ಎರಡು ದಿನಗಳ ಕಾಲ ಎನ್‌ಐಟಿಕೆಯಲ್ಲಿ ಸ್ಫೋಟಕ ತಂತ್ರಜ್ಞಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯುತ್ತಿದ್ದು ಈ ಸಂಬಂಧ ಬುಧವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ವಿದೇಶಗಳಲ್ಲಿ ಈಗಾಗಲೇ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಭಾರತಕ್ಕೆ ಇದೀಗ ಪರಿಚಯಿಸಲಾಗುತ್ತಿದ್ದು ಕೆಲ ಉದ್ಯಮಗಳು ಬಳಸಲು ಮುಂದೆ ಬಂದಿವೆ. ಆದರೆ ಹೊಸ ತಂತ್ರಜ್ಞಾನ ತುಂಬ ವೆಚ್ಚದಾಯಕ. ಹಾಗಾಗಿ ಬಹಳಷ್ಟು ಕಂಪೆನಿಗಳು ಹಿಂದೇಟು ಹಾಕುತ್ತಿವೆ ಎಂದು ವಾಸ್ತವ ಚಿತ್ರಣ ನೀಡಿದರು.

ಭಾರತದಲ್ಲಿ ನಿತ್ಯ ಕನಿಷ್ಠ 40ರಿಂದ 50 ಟನ್ ಸ್ಫೋಟಕ ಬಳಕೆಯಾಗುತ್ತಿದೆ. ಪ್ರತಿ ವರ್ಷ ರೂ. 1 ಕೋಟಿ ಮೊತ್ತದ ಸ್ಫೋಟಕ ಬಳಸುವ ಮಾಹಿತಿ ಇದ್ದು ಹೊಸ ತಂತ್ರಜ್ಞಾನದ ಮೂಲಕದ ಬಳಕೆಯಲ್ಲಿ ಮಿತವ್ಯಯ ಸಾಧಿಸಬಹುದಾಗಿದೆ ಎಂದರು.

ದೇಶದ ಹಲವು ಖ್ಯಾತ ಉದ್ಯಮ ಸಂಸ್ಥೆಗಳ ಜತೆಗೆ ರಾಜ್ಯದ ಎನ್‌ಎಂಪಿಟಿ. ಆಲಮಟ್ಟಿ ಡ್ಯಾಂ, ಗಾಜನೂರು ಡ್ಯಾಂ ಮತ್ತಿತರ ಕಡೆ ನಡೆಸಲಾಗುವ ಸ್ಫೋಟಕ ಚಟುವಟಿಕೆಗೆ ನಮ್ಮ ವಿಭಾಗದ ಸಲಹೆ ಸಹಕಾರ ನೀಡಲಾಗಿದೆ ಎಂದರು.

ಕುದುರೆಮುಖದಲ್ಲಿ ಸದ್ಯ ಯಾವುದೇ ರೀತಿಯ ಗಣಿಗಾರಿಕೆ ನಡೆಯುತ್ತಿಲ್ಲ, ಅಲ್ಲಿಯ ಎಲ್ಲ ಕೆಲಸ ಸ್ಥಗಿತಗೊಳಿಸಿ ವರ್ಷಗಳೇ ಕಳೆದಿವೆ ಎಂದು ಅವರು ಸ್ಪಷ್ಟಪಡಿಸಿದರು. ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಲ್ಲಿಯ ಕಟ್ಟಡಕ್ಕೆ ಯಾವುದೇ ತೊಂದರೆ ಇಲ್ಲ ಎಂದೂ ಡಾ. ಶಾಸ್ತ್ರಿ ಸ್ಪಷ್ಟಪಡಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ. ರಾಮ ಚಂದರ್ ಇದ್ದರು.

ಉದ್ಘಾಟನೆ 18ಕ್ಕೆ
ಸ್ಫೋಟಕ ತಂತ್ರಜ್ಞಾನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಎನ್‌ಐಟಿಕೆಯಲ್ಲಿ ಇದೇ 18ರಂದು ಬೆಳಿಗ್ಗೆ 10ಕ್ಕೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್) ಪಣಂಬೂರು ಘಟಕ ಅಧ್ಯಕ್ಷ ಕೆ.ರಂಗನಾಥ್ ಉದ್ಘಾಟಿಸುವರು. 

 ಕೇಂದ್ರ ಉಕ್ಕು ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಮಚೇಂದ್ರನಾಥ್, ಎನ್‌ಎಂಡಿಸಿ ನಿರ್ದೇಶಕ ಎನ್.ಕೆ. ನಂದಾ ಸೇರಿದಂತೆ ಹಲವು ತಜ್ಞರು ಪಾಲ್ಗೊಳ್ಳುವರು. ವಿವಿಧ ರಾಜ್ಯಗಳ 150ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ. ವಿಚಾರ ಸಂಕಿರಣದ ನಿರ್ಣಯಗಳನ್ನು ಕೇಂದ್ರ ಉಕ್ಕು ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.