ADVERTISEMENT

ಬಗ್ಗುಂಡಿ: ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 9:00 IST
Last Updated 15 ಮಾರ್ಚ್ 2011, 9:00 IST
ಬಗ್ಗುಂಡಿ: ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ
ಬಗ್ಗುಂಡಿ: ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ   

ಸುರತ್ಕಲ್: ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಬಗ್ಗುಂಡಿಯ ಕೆರೆಯಲ್ಲಿನ ಮೀನು ಹಿಡಿಯುವ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಇಲ್ಲಿನ ಕೋಡ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಅಂಗವಾಗಿ ಈ ಸಂಪ್ರದಾಯ ನಡೆಯುತ್ತ ಬಂದಿದೆ.

ಗ್ರಾಮದ ಜಾತ್ರೆಯಾಗಿರುವ ಈ ಕಾರ್ಯಕ್ರಮದಲ್ಲಿ ಊರಿನ ಜನತೆ ಬೆಳಕು ಹರಿಯುವ ಮುಂಚೆಯೇ ಕರೆಯ ಬಳಿ ನೆರೆದಿದ್ದರು. ದೈವಸ್ಥಾನದಲ್ಲಿ ಸಿಡಿಮದ್ದು ಸಿಡಿಸಿದ ಬಳಿಕ ಕೆರೆಗೆ ಇಳಿದು ಮೀನು ಹಿಡಿಯುವುದು ಇಲ್ಲಿನ ಸಂಪ್ರದಾಯವಾಗಿದೆ. ಗ್ರಾಮದ ಎಲ್ಲರ ಮನೆಯಲ್ಲಿವರು  ಈ ಕೆರೆಯಲ್ಲಿ ಹಿಡಿದ ಮೀನಿನ ಪದಾರ್ಥವನ್ನು ಪ್ರಸಾದರೂಪದಲ್ಲಿ ಸ್ವೀಕರಿಸುತ್ತಾರೆ. ಮನೆಗೆ ಬಂದ ಅತಿಥಿಗಳಿಗೂ ಈ ಮೀನಿನದ್ದೇ ಭೂರಿಭೋಜನ ಬಡಿಸುತ್ತಾರೆ.

ಕಳೆದ ಬಾರಿ ಮಳೆಯ ಪ್ರಮಾಣ ಅಧಿಕವಾಗಿದ್ದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಿತ್ತು. ಜತೆಗೆ   ಕೆಸರೂ ತುಂಬಿದ್ದರಿಂದ ಮೀನು ಹಿಡಿಯುವವರು ತುಸು ಕಷ್ಟ ಪಡಬೇಕಾಯಿತು. ಆದರೆ  ಸಂಪ್ರದಾಯ  ಮುರಿಯದೇ ಮೀನು ಹಿಡಿದರು. ಮಕ್ಕಳು, ಯುವಕರು, ವೃದ್ಧರೆನ್ನದೇ ಎಲ್ಲಾ ವಯೋಮಾನದವರು ಕೆರೆಗೆ ಇಳಿದು ಮೀನು ಹಿಡಿದರು.

ಊರಿನ ಹಿರಿಯರು ಹೇಳುವ ಪ್ರಕಾರ ಕಳೆದ ಹಲವು ವರ್ಷಗಳಿಂದ ಈ  ಜಾತ್ರೆ ಇಲ್ಲಿ ನಡೆಯುತ್ತಿದೆ. ಕೈಗಾರೀಕೀಕರಣ ಹಾಗೂ ಎಂಎಸ್‌ಇಝೆಡ್ ನಿರ್ವಸಿತ ವಸತಿ ಸಮುಚ್ಚಯ ಇಲ್ಲಿ ನಿರ್ಮಾಣವಾಗುವ ಸಂದರ್ಭದಲ್ಲಿ ಕೆರೆ ಒತ್ತುವರಿಯ ಭೀತಿ ಎದುರಾಗಿತ್ತು. ಗ್ರಾಮಸ್ಥರ ಸಂಘಟಿತ ಹೋರಾಟದಿಂದ ಕೆರೆ ಉಳಿಯುವಂತಾಯಿತು. ಸಂಪ್ರದಾಯ ಮುಂದುವರಿಯಿತು ಎಂದು ಹಿಂದಿನ ಘಟನೆಯನ್ನು ಕೆಲವರು ನೆನಪಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.