ADVERTISEMENT

ಬದಿಯಡ್ಕ: ಭಾರಿ ಮಳೆ- 2 ಸಾವು, ಸೊತ್ತು ನಷ್ಟ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 11:03 IST
Last Updated 19 ಜೂನ್ 2013, 11:03 IST

ಬದಿಯಡ್ಕ: ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಎರಡು ಜೀವಹಾನಿಯಾಗಿದೆ. ಭಾರಿ ನಷ್ಟ ಉಂಟಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಬದಿಯಡ್ಕವೂ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದ ಹಾನಿಯಾಗಿದೆ.

ಅಡೂರು ಸಮೀಪದ ಪಳ್ಳಂಗೋಡಿನ ಮೊರಂಗಾನ ಎಂಬಲ್ಲಿ ಸೋಮವಾರ ತಡರಾತ್ರಿ ಗುಡ್ಡೆಯೊಂದು ಮನೆಯೊಂದರ ಅಡುಗೆ ಕೊಠಡಿ ಮೇಲೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮುಸ್ಲಿಂ ಲೀಗ್ ಮುಖಂಡ ಎಂ.ಎ.ಅಬ್ದುಲ್ ಖಾದರ್ ಅವರ ಪತ್ನಿ ಅಸ್ಮಾ (38) ಹಾಗೂ ಇಬ್ರಾಹಿಂ ಎಂಬವರ ಪುತ್ರ ಮುಬೀನ್ (12) ಎಂದು ಗುರುತಿಸಲಾಗಿದೆ.

ಸುಮಾರು 100 ಅಡಿ ಎತ್ತರದಿಂದ ಗುಡ್ಡೆ ಕುಸಿದಿತ್ತು. ಗುಡ್ಡೆ ಕುಸಿದ ಶಬ್ದಕ್ಕೆ ಮನೆಯ ಇತರರು ಓಡಿ ಹೋಗಿ ಬದುಕಿ ಉಳಿದರು. ಅಸ್ಮಾ ಹಾಗೂ ಮುಬೀನ್ ಮಣ್ಣಿನೊಳಗೆ ಹೂತು ಹೋದರು. ಆದೂರು ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್, ಎಸ್‌ಐ ಕೆ. ದಾಮೋದರನ್ ನೇತೃತ್ವದ ಪೊಲೀಸ್ ತಂಡ, ಕಾಸರಗೋಡು ಹಾಗೂ ಕುತ್ತಿಕ್ಕೋಲಿನಿಂದ ಆಗಮಿಸಿದ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ನಾಗರಿಕರ ಸಹಕಾರದೊಂದಿಗೆ ಮೃತದೇಹಗಳನ್ನು ಮಣ್ಣಿನ ರಾಶಿಯೊಳಗಿನಿಂದ ಹೊರತೆಗೆಯಲಾಯಿತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಪಿ.ಎಸ್. ಮಹಮ್ಮದ್ ಸಗೀರ್ ಭೇಟಿ ನೀಡಿದರು.

ಬದಿಯಡ್ಕ ಪರಿಸರದ ಕರಿಂಬಿಲ ಹಾಗೂ ಕೆಡೆಂಜಿಯಲ್ಲೂ ಮಳೆಯಿಂದ ನಷ್ಟ ಉಂಟಾಗಿದೆ. ಕರಿಂಬಿಲ ಬಳಿಯ ಕೋಡಿಯಡ್ಕ ಈಶ್ವರ ಭಟ್ ಅವರ ಮನೆ ಮೇಲೆ ಗುಡ್ಡೆ ಕುಸಿದುದರಿಂದ  ಮನೆಯ ಗೋಡೆ ಬಿರುಕು ಬಿಟ್ಟಿದೆ. ಕೆಡೆಂಜಿಯಲ್ಲಿ ತಂಗಚ್ಚನ್ ಎಂಬವರ ಮನೆಯ ಮೇಲೂ ಗುಡ್ಡೆ ಹಾಗೂ ಬಂಡೆ ಅಪ್ಪಳಿಸಿದ್ದು, ಮನೆಯ ಗೋಡೆ ಕುಸಿದಿದೆ.

ತಂಗಚ್ಚನ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಸಲಾಗಿದೆ. ಈ ಘಟನೆಯಲ್ಲಿ ಒಟ್ಟು 2 ಲಕ್ಷ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ. ಮುಳ್ಳೇರಿಯಾ ಬಳಿಯ ಆದೂರಿನ ಕಲತ್ತಿಲ್ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸಫಿಯಾ ಎಂಬವರ ಮನೆಯು ಮಂಗಳವಾರ ಮುಂಜಾನೆ ಕುಸಿದು ಬಿದ್ದಿದೆ.

ಅನೇಕ ಪ್ರದೇಶಗಳಲ್ಲಿ ಕೆಲ ದಿನಗಳಿಂದ ವಿದ್ಯುತ್, ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಅಡಿಕೆ ಕೃಷಿಕರಿಗೆ ಮಹಾಳಿ ರೋಗದ ಭೀತಿ ತಲೆದೋರಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.