ADVERTISEMENT

ಬಿಜೆಪಿಗೆ ಗಡುವು ವಿಸ್ತರಿಸಿದ ಸತ್ಯಜಿತ್‌

ಮಂಗಳವಾರ ಬೆಳಿಗ್ಗೆಯೊಳಗೆ ಉತ್ತರ ನೀಡುವಂತೆ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 11:06 IST
Last Updated 24 ಏಪ್ರಿಲ್ 2018, 11:06 IST
ಸತ್ಯಜಿತ್ ಸುರತ್ಕಲ್‌
ಸತ್ಯಜಿತ್ ಸುರತ್ಕಲ್‌   

ಮಂಗಳೂರು: ಪಕ್ಷ ಟಿಕೆಟ್‌ ನಿರಾಕರಿಸಿರುವುದರಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್‌, ಟಿಕೆಟ್‌ ನಿರಾಕರಿಸಲು ಕಾರಣ ಮತ್ತು ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಲು ಬಿಜೆಪಿ ಮುಖಂಡರಿಗೆ ನೀಡಿದ್ದ ಗಡುವನ್ನು ಮಂಗಳವಾರ ಬೆಳಿಗ್ಗೆ 8 ಗಂಟೆಯ ವರೆಗೆ ವಿಸ್ತರಿಸಿದ್ದಾರೆ.

ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್‌ ಕಾರ್ಣಿಕ್‌ ಸೋಮವಾರ ಎರಡು ಬಾರಿ ಸತ್ಯಜಿತ್‌ರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.ಯಾವ ಕಾರಣಕ್ಕಾಗಿ ಟಿಕೆಟ್‌ ನಿರಾಕರಿಸಲಾಗಿದೆ ಮತ್ತು ಡಾ.ವೈ.ಭರತ್‌ ಶೆಟ್ಟಿ ಕ್ಷೇತ್ರದಲ್ಲಿ ತಮಗಿಂತಲೂ ಹೆಚ್ಚಿನ ಮತ ಗಳಿಸಲು ಶಕ್ತರೇ ಎಂಬ ಪ್ರಶ್ನೆಗಳಿಗೆ ಸೋಮವಾರ ಸಂಜೆಯೊಳಗೆ ಉತ್ತರಿಸುವಂತೆ ಸತ್ಯಜಿತ್‌ ಭಾನುವಾರ ಬೇಡಿಕೆ ಇಟ್ಟಿದ್ದರು. ತಮಗೆ ಸಕಾರಣಗಳಿಲ್ಲದೇ ಟಿಕೆಟ್‌ ನಿರಾಕರಿಸಿದ್ದಲ್ಲಿ ತಪ್ಪನ್ನು ಒಪ್ಪಿಕೊಂಡು, ಸೂಕ್ತ ಸ್ಥಾನಮಾನದ ಭರವಸೆ ನೀಡುವಂತೆ ಕೇಳಿದ್ದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿರುವ ಉತ್ತರ ಪ್ರದೇಶದ ಸಚಿವ ಡಾ.ಮಹೇಂದ್ರ ಸಿಂಗ್‌ ಕೂಡ ಒಮ್ಮೆ ಭೇಟಿಯಾಗಿ ಚರ್ಚಿಸಿದರು. ಆರ್‌ಎಸ್‌ಎಸ್‌ ವಿಭಾಗೀಯ ಕಾರ್ಯವಾಹ ನಾ.ಸೀತಾರಾಮ್‌ ಅವರೂ ಸತ್ಯಜಿತ್‌ ಅವರೊಂದಿಗೆ ಚರ್ಚೆ ನಡೆಸಿದರು. ಸತ್ಯಜಿತ್‌ ಅವರ ಪ್ರಶ್ನೆಗಳಿಗೆ ನಿಖರವಾದ ಉತ್ತರ ನೀಡಲು ಪಕ್ಷದ ಮುಖಂಡರಿಗೆ ಸಾಧ್ಯವಾಗಿಲ್ಲ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸತ್ಯಜಿತ್‌, ‘ಕ್ಷೇತ್ರದಲ್ಲಿ ಈಗ ಆಯ್ಕೆ ಮಾಡಿದ ಅಭ್ಯರ್ಥಿ ಭರತ್‌ ಶೆಟ್ಟಿ ಅವರಷ್ಟು ಶಕ್ತಿ ನನಗೆ ಇಲ್ಲ ಎಂದು ಪಕ್ಷದ ಪ್ರಮುಖರು ನೇರವಾಗಿ ಹೇಳಿದರೆ ಇರುವ ಸ್ಥಾನವನ್ನೂ ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ. ನನ್ನ ವಿಚಾರದಲ್ಲಿ ತಪ್ಪಾಗಿದ್ದರೆ, ಅದನ್ನು ಒಪ್ಪಿಕೊಳ್ಳಬೇಕು. ಸೂಕ್ತ ಸ್ಥಾನದ ಭರವಸೆ ನೀಡಬೇಕು. ಮಂಗಳವಾರ ಬೆಳಿಗ್ಗೆ 8 ಗಂಟೆಯೊಳಗೆ ತೀರ್ಮಾನ ತಿಳಿಸದಿದ್ದರೆ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.