ADVERTISEMENT

ಬಿಜೆಪಿಗೆ ರಾಮನ ಶಾಪ: ಜೆಡಿಎಸ್ ಅಣಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 7:40 IST
Last Updated 10 ಫೆಬ್ರುವರಿ 2012, 7:40 IST

ಮಂಗಳೂರು: ಮಾಜಿ ಸಚಿವ ಕೃಷ್ಣ ಪಾಲೆಮಾರ್ ನೀಲಿ ಚಿತ್ರದ ವಿತರಕರು. ಅಶ್ಲೀಲ ಚಿತ್ರದ ಬಗ್ಗೆ ಭಾರಿ ಆಸಕ್ತಿ ಇದ್ದರೆ ಬೆಡ್ ರೂಂನಲ್ಲಿ ಸೆಕ್ಸ್ ಚಿತ್ರಗಳ ಲೈಬ್ರೆರಿ ಸ್ಥಾಪಿಸಲಿ~ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಲೇವಡಿಯಾಡಿದರು.

ವಿಧಾನಸಭೆಯಲ್ಲೇ ಸೆಕ್ಸ್ ಚಿತ್ರ ವೀಕ್ಷಿಸಿದ ಕಳಂಕಿತ ಮೂವರು ಮಾಜಿ ಸಚಿವರ ಶಾಸಕತ್ವ ರದ್ದುಗೊಳಿಸಬೇಕು ಹಾಗೂ ಮೂವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ, ಸಚಿವರ ಆಯ್ಕೆ ಆಗುವುದು ಆರ್‌ಎಸ್‌ಎಸ್ ಕಚೇರಿಯಲ್ಲಿ. ಈ ಘಟನೆಗೆ ಆರ್‌ಎಸ್‌ಎಸ್ ಮುಖಂಡರು ಉತ್ತರ ಕೊಡಬೇಕು. ಸಂಸ್ಕೃತಿ ಬಗ್ಗೆ ಮಾತನಾಡುವ ಕಲ್ಲಡ್ಕ ಪ್ರಭಾಕರ ಭಟ್ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಗೆ ರಾಮನ ಶಾಪ ಇದೆ. ರಾಮನ ಹೆಸರು ಹಾಳು ಮಾಡಿದವರು ಅವರು. ಪಾದುಕೆಯನ್ನು ದುರ್ಬಳಕೆ ಮಾಡಿಕೊಂಡವರು. ಈಗ ಆ ಶಾಪ ತಟ್ಟಿದೆ ಎಂದು ಅವರು ಟೀಕಿಸಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ವಿಧಾನಸೌಧಕ್ಕೆ ದೇವಸ್ಥಾನದಷ್ಟೇ ಪಾವಿತ್ರ್ಯ ಇದೆ. ಸಂಸ್ಕೃತಿ ಕಲಿಸುವ ಪಕ್ಷ ಎಂಬ ಘೋಷಿಸಿಕೊಂಡಿದ್ದ ಬಿಜೆಪಿಯ ಬಣ್ಣ ಈಗ ಬಯಲಾಗಿದೆ ಎಂದು ದೂರಿದರು.

ಬಿಜೆಪಿ ಸರ್ಕಾರ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ. ವಿಧವಾ ವೇತನ ನಿಲ್ಲಿಸಿದೆ. ವೃದ್ಧರಿಗೆ, ಅಂಗವಿಕಲರಿಗೆ ಸೌಲಭ್ಯ ಕೊಟ್ಟಿಲ್ಲ ಎಂದು ಅವರು ಆಪಾದಿಸಿದರು.

ಜೆಡಿಎಸ್ ಮುಖಂಡರಾದ ವಸಂತ ಪೂಜಾರಿ, ಶಶಿರಾಜ ಶೆಟ್ಟಿ ಕಾವೂರು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಅಜೀಜ್ ಕುದ್ರೋಳಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.