ADVERTISEMENT

ಬಿಸಿಯೂಟ ಜತೆ ಪೌಷ್ಠಿಕ ಆಹಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 6:40 IST
Last Updated 23 ಫೆಬ್ರುವರಿ 2011, 6:40 IST

ಪಡುಬಿದ್ರಿ: ಅಂಗನವಾಡಿ ಮಕ್ಕಳಿಗೆ ಬಿಸಿ ಊಟದೊಂದಿಗೆ ಪೌಷ್ಠಿಕ ಆಹಾರ ಒದಗಿಸುವುದು ಮತ್ತು ಅಂಗನವಾಡಿಯ ಸಂಪೂರ್ಣ ಜವಾಬ್ದಾರಿ ಗ್ರಾಪಂಗೆ ನೀಡಬೇಕು ಎಂಬ ನಿರ್ಣಯವನ್ನು ಮಂಗಳವಾರ ನಡೆದ ಬೆಳಪು ಗ್ರಾಪಂ ಮಾದರಿ ಗ್ರಾಮಸಭೆಯಲ್ಲಿ ಕೈಗೊಳ್ಳಲಾಯಿತು.

ಬೆಳಪು ಗ್ರಾಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಿತು. ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚು ಒತ್ತು ನೀಡುವುದು. ಅಧಿಕಾರ ಮೊಟಕುಗೊಳಿಸದಂತೆ ಸರ್ಕಾರಕ್ಕೆ ಒತ್ತಾಯ ಪಡಿಸುವುದು, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿದ್ಯುತ್ ಬಿಲ್ಲನ್ನು ರದ್ದು ಮಾಡುವುದು ಇವೇ ಮೊದಲಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಇದೇ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಪ್ರಮುಖ 10 ಬೇಡಿಕೆಗಳ ಮನವಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕರ ಪೂಜಾರಿ ಅವರಿಗೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರಿಗೆ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ.ಪ್ರತಿಯೊಬ್ಬರಿಗೂ ಇದರ ಪ್ರಯೋಜನ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಮಾದರಿ ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಜಿಪಂ ಅಧ್ಯಕ್ಷ ಶಂಕರ ಪೂಜಾರಿ, ಮಾದರಿ ಗ್ರಾಮ ಸಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಗ್ರಾಮ ಸಭೆಯನ್ನು ಎಲ್ಲಾ ಗ್ರಾಪಂಗಳು ಅಳವಡಿಸಿಕೊಳ್ಳಬೇಕು. ಗ್ರಾಪಂ ಸದಸ್ಯರಲ್ಲಿ ಇದಕ್ಕೆ ಇಚ್ಚಾಶಕ್ತಿ ಇರಬೇಕು. ಆಗ ಗ್ರಾಮವು ಗಾಂಧಿ ಕಂಡ ಗ್ರಾಮರಾಜ್ಯವಾಗಲು ಸಾಧ್ಯ ಎಂದರು.ತಾಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಪಂಗಳಿಗೆ ಶಾಶ್ವತ ಆದಾಯ ಮೂಲ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

ಉಪಾಧ್ಯಕ್ಷ ನಿರಂಜನ್ ಶೆಟ್ಟಿ, ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, ತಾಪಂ ಸದಸ್ಯೆ ಕೇಸರಿ ಎಂ, ನೋಡಲ್ ಅಧಿಕಾರಿಯಾಗಿದ್ದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ಜಿಪಂ ಕಾರ್ಯಕಾರಿ ಅಭಿಯಂತರ ಶ್ರೀಧರ ಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ.ಮಂಜುನಾಥಯ್ಯ, ಜಿಲ್ಲಾ ಜಲಾನಯನ ಅಧಿಕಾರಿ ವಿ.ಎಸ್.ಅಶೋಕ್, ಸಹಾಯಕ ಕಾರ್ಯಕಾರಿ ಅಭಿಯಂತರ ಡಿ.ವಿ.ಹೆಗ್ಡೆ, ಶಿರ್ವ ಎಸ್.ಐ. ಕೆ.ಆರ್.ನಾಯ್ಕೆ, ಕೃಷಿ ಸಹಾಯಕ ಅಧಿಕಾರಿ ಕೃಷ್ಣ ಸ್ವಾಮಿ, ಜಲಾನಯನ ಇಲಾಖೆಯ ಸತೀಶ್ ರಾಜ್, ರೇಷ್ಮೆ ಇಲಾಖೆಯ ಹಿರಿಯಣ್ಣ ಹೆಬ್ಬಾರ್ ಮತ್ತು ಉಪೇಂದ್ರ ನಾಯಕ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಡಾ.ಆಂಜನೇಯ, ಕುಂದಾಪುರ ನಮ್ಮಭೂಮಿ ಕೇಂದ್ರದ ವೆಂಕಟೇಶ್, ಜ್ಞಾನ ಜ್ಯೋತಿ ಕೇಂದ್ರದ ಇಬ್ರಾಹಿಂ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.