ADVERTISEMENT

ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:05 IST
Last Updated 11 ಅಕ್ಟೋಬರ್ 2011, 9:05 IST

ಸುಳ್ಯ: `ಮಂಡೆಕೋಲು ಗಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದೇನೆ~ ಎಂದು ನೂತನ ಅಧ್ಯಕ್ಷೆ ಎಂ.ಸರೋಜಿನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ಆದರೆ ಬಿಜೆಪಿ ಸದಸ್ಯರು ಬೆಂಬಲ ನೀಡಿದ್ದರಿಂದ ತಾನು ಆಯ್ಕೆಯಾಗಿದ್ದೇನೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತನಗೆ ಮೋಸ ಮಾಡಿದೆ. ಪಂಚಾಯಿತಿಯ ಅಭಿವೃದ್ಧಿಗೆ ಪಕ್ಷ-ಬೇಧ ಬಿಟ್ಟು ದುಡಿಯುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ವಚನಭ್ರಷ್ಟ-ಬಿಜೆಪಿ ಆರೋಪ: ಮಾಜಿ ಅಧ್ಯಕ್ಷೆ ವಸಂತಿ ಉಗ್ರಾಣಿಮನೆ ರಾಜೀನಾಮೆ ನೀಡಿದ್ದರೂ, ಒಪ್ಪಂದದಂತೆ ಉಪಾಧ್ಯಕ್ಷ ಮಹಮ್ಮದ್ ಕುಂಞಿ ರಾಜೀನಾಮೆ ನೀಡದೆ ವಚನ ಭ್ರಷ್ಟರಾಗಿದ್ದಾರೆ ಎಂದು ಬಿಜೆಪಿ ದೂರಿದೆ.

ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಒಪ್ಪಂದದಂತೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಚುನಾಯಿಸಲು ಸಹಕಾರ ನೀಡಿದ್ದೇವೆ. ಅವರಲ್ಲೇ ಒಮ್ಮತ ಮೂಡದೇ ಆ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಹಾಗಾಗಿ ಸರೋಜಿನಿ ಆಯ್ಕೆಯಾಗಿದ್ದರೆ. ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯಕ್ಕೆ ನಾವು ಜವಾಬ್ದಾರರಲ್ಲ ಎಂದು ಜಿ.ಪಂ. ಸದಸ್ಯ ನವೀನ್ ರೈ ಮೇನಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷದ ಒತ್ತಡ ಇರಲಿಲ್ಲ. ಚುನಾವಣೆಗೆ ಅವಕಾಶ ನೀಡಬೇಡಿ ಎಂದು ಹೇಳಿದ್ದೆವು. ಅವರೊಳಗಿನ ಭಿನ್ನಾಭಿಪ್ರಾಯ ಮರೆಮಾಚಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಗೆದ್ದು, ಬಿಜೆಪಿ ಬೆಂಬಲದೊಂದಿಗೆ ಸುಳ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ವಚನಭ್ರಷ್ಟತೆಗೆ ಉತ್ತಮ ಉದಾಹರಣೆ. ಅವರ ಉಪದೇಶ ನಮಗೆ ಬೇಡ~ ಎಂದರು.
ಪದ್ಮನಾಭ ಚೌಟಾಜೆ, ಜನಾರ್ದನ ಬರೆಮೇಲು, ಸುರೇಶ್ ಕಣೆಮರಡ್ಕ, ರಾಧಾಕೃಷ್ಣ ಬೊಳ್ಳೂರು, ಗುಣವತಿ ಕೊಲ್ಲಂತಡ್ಕ, ಮಮತಾ ಬೊಳುಗಲ್ಲು, ಜಯರಾಜ್ ಕುಕ್ಕೇಟಿ, ಪ್ರಕಾಶ್ ಹೆಗ್ಡೆ, ಶಿವಪ್ರಸಾದ್, ಸುಂದರ ಕಾಡುಸೊರಂಜ, ಹರೀಶ್ ಉಬರಡ್ಕ, ಮನಮೋಹನ, ಕುಮಾರ್ ಮಾವಂಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.