ADVERTISEMENT

ಬೆಳ್ತಂಗಡಿ: ರಸ್ತೆ, ಕೃಷಿ ಭೂಮಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:23 IST
Last Updated 15 ಜೂನ್ 2018, 13:23 IST

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ವ್ಯಾಪಕ ಮಳೆಯಾಗಿದ್ದು, ತಾಲ್ಲೂಕಿನಲ್ಲಿ ಅಪಾರ ಮಳೆ ಹಾನಿ ಸಂಭವಿಸಿದೆ.

ಹಲವಾರು ಕಡೆ ಕೃಷಿಕರು ಬೆಳೆದ ಭತ್ತದ ಗದ್ದೆ, ಅಡಿಕೆ ಮತ್ತು ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಗುರುವಾರ ಬೆಳಗಿನ ಜಾವ ಮನೆ ಮುಂದಿನ ಕೃಷಿ ಭೂಮಿಯಲ್ಲಿ ಸಮುದ್ರದಂತಹ ವಾತಾವರಣ ಎಲ್ಲ ಕಡೆಗೆ ಕಂಡು ಬರುತ್ತಿತ್ತು. ತಾಲ್ಲೂಕಿನಲ್ಲಿ ಹರಿಯುವ ಪಲ್ಗುಣಿ, ನೇತ್ರಾವತಿ, ಸೋಮಾವತಿ ನದಿಗಳು ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಅಪಾಯದ ಮಟ್ಟದಲ್ಲಿ ಇದ್ದದ್ದು ಕಂಡು ಬರುತ್ತಿತ್ತು. ಅನೇಕ ಕಡೆಗಳಲ್ಲಿ ನದಿಗಳಿಗೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದು ಹೋಗಿದೆ.

ಗುರುವಾಯನಕೆರೆ ಸಮೀಪದ ಭಂಟರ ಭವನದ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿ ಪ್ರವಾಹ ಉಂಟಾಗಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಬುಧವಾರ ರಾತ್ರಿ ಬಿದ್ದ ವ್ಯಾಪಕ ಮಳೆ ಗಮನಿಸಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು.

ADVERTISEMENT

ಮಳೆ ಅಬ್ಬರ ಕಡಲ್ಕೊರೆತ: ಸಚಿವರ ಭೇಟಿ

ಉಳ್ಳಾಲ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನಿಗದಿಯಾಗಿದ್ದರಿಂದ ನೇರವಾಗಿ ಸೋಮೇಶ್ವರ ಉಚ್ಚಿಲಕ್ಕೆ ಬಂದಿದ್ದರು. ಕಡಲ್ಕೊರೆತ ತಡೆಗೆ ತಾತ್ಕಾಲಿಕ ಪರಿಹಾರವಾಗಿ ತಟದಲ್ಲಿ ಅಳವಡಿಸಲಾಗಿದ್ದ ಕಲ್ಲಿನ ತಡೆಗೋಡೆ ಬಳಿ ನಿಂತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು. ಕಲ್ಲಿನ ಮೇಲೇರಲು ಅವರಿಗೆ ಆಗದ ಕಾರಣ ಸ್ಥಳೀಯರು ಏಣಿ ತಂದು ಕಲ್ಲಿಗೆ ತಾಗಿಸಿ ಇಟ್ಟು ಮೇಲೇರಿ ಸಮುದ್ರ ವೀಕ್ಷಿಸುವಂತೆ ತಿಳಿಸಿದರೂ, ಸಚಿವರು ನಿರಾಕರಿಸಿದರು. ಕೆಲವೇ ನಿಮಿಷ ಅಲ್ಲಿದ್ದ ಸಚಿವರು ನಂತರ ನೇರವಾಗಿ ಮಂಗಳೂರಿಗೆ ತೆರಳಿದರು.

ಈ ಸಂದರ್ಭ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.