ADVERTISEMENT

`ಬೆಳ್ತಂಗಡಿ ಸಮಗ್ರ ಅಭಿವೃದ್ಧಿಗೆ ಕ್ರಮ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:47 IST
Last Updated 5 ಸೆಪ್ಟೆಂಬರ್ 2013, 8:47 IST
ಬೆಳ್ತಂಗಡಿಯಲ್ಲಿ ಬುಧವಾರ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನಾ ಸಮಾವೇಶವನ್ನು ಶಾಸಕ ಕೆ.ವಸಂತ ಬಂಗೇರ  ಉದ್ಘಾಟಿಸಿದರು. ಕೆ.ಪ್ರತಾಪಸಿಂಹ ನಾಯಕ್, ಕೆ. ಹರೀಶ್ ಕುಮಾರ್ ಮತ್ತು  ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಜೇಮ್ಸ ಡಿ'ಸೋಜ ಉಪಸ್ಥಿತರಿದ್ದರು.
ಬೆಳ್ತಂಗಡಿಯಲ್ಲಿ ಬುಧವಾರ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನಾ ಸಮಾವೇಶವನ್ನು ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು. ಕೆ.ಪ್ರತಾಪಸಿಂಹ ನಾಯಕ್, ಕೆ. ಹರೀಶ್ ಕುಮಾರ್ ಮತ್ತು ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಜೇಮ್ಸ ಡಿ'ಸೋಜ ಉಪಸ್ಥಿತರಿದ್ದರು.   

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ 43 ಗ್ರಾಮ ಪಂಚಾಯಿತಿ ಹಾಗೂ ಒಂದು ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿ ತಲಾ ಎರಡು ಕಾಮಗಾರಿಗಳಂತೆ ಈ ವರ್ಷ 86 ಅಭಿವೃದ್ಧಿ ಕಾಮಗಾರಿಗಳನ್ನು ಆನುಷ್ಠಾನಗೊಳಿಸಲಾಗುವುದು. ಜನರ ಬೇಡಿಕೆಗಳನ್ನು ಸ್ವೀಕರಿಸಿ, ಸ್ವೀಕೃತಿ ಪತ್ರ ನೀಡಿ, ಬಳಿಕ ವಿಂಗಡಿಸಿ ಆದ್ಯತೆಯ ನೆಲೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೆಳ್ತಂಗಡಿಯನ್ನು ಮಾದರಿ ತಾಲ್ಲೂಕನ್ನಾಗಿ ರೂಪಿಸಲಾಗುವುದು. ಈ ಬಗ್ಗೆ ಸಮಾಲೋಚನೆಗೆ ಚಿಂತನಾ ಸಮಾವೇಶ ಏರ್ಪಡಿಸಲಾಗಿದೆ  ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.

ಬೆಳ್ತಂಗಡಿಯಲ್ಲಿ ಜೈನಪೇಟೆಯ ಗುಣಾವತಿ ಅಮ್ಮ ಸಭಾಭವನದಲ್ಲಿ ಬುಧವಾರ ತಾಲ್ಲೂಕಿನ ಸಮಗ್ರ ಆಭಿವೃದ್ಧಿ ಬಗ್ಗೆ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಲಾಖಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಆಗಾಗ ಸಮಾಲೋಚನೆ ನಡೆಸಿ ಕಾರ್ಯಕ್ರಮ ರೂಪಿಸಲಾಗುವುದು. ತಾಲ್ಲೂಕಿಗೆ ಮಳೆಹಾನಿಗಾಗಿ ಸರ್ಕಾರ ಕೇವಲ 15 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಕನಿಷ್ಠ ಎರಡೂವರೆ ಕೋಟಿ ರೂಪಾಯಿ ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವು 81 ಗ್ರಾಮಗಳನ್ನು ಹೊಂದಿದ ಆತಿ ದೊಡ್ಡ ಕ್ಷೇತ್ರವಾಗಿದ್ದು ಇದನ್ನು ಎರಡು ವಿಧಾನ ಸಭಾ ಕ್ಷೇತ್ರಗಳಾಗಿ ವಿಂಗಡಿಸಬೇಕೆಂದು  ಸಲಹೆ ನೀಡಿದರು.

ಅಡಿಕೆ ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರಧನವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರ 25 ಕೋಟಿ ರೂಪಾಯಿ ನೆರವು ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಕಳುಹಿಸಿದ ಸಂದೇಶವನ್ನು ಬಂಗೇರ ಸಭೆಯಲ್ಲಿ ಪ್ರಕಟಿಸಿದರು.

ಎಂಡೊ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಅವರು ನೇತ್ರಾವತಿ ನದಿ ತಿರುವು ಯೋಜನೆ ಮತ್ತು ನಿಡ್ಡೋಡಿಯಲ್ಲಿ ಅಣುವಿದ್ಯುತ್ ಸ್ಥಾವರ ಪ್ರಾರಂಭಕ್ಕೆ ತೀವ್ರ ವಿರೋಧ ಸೂಚಿಸಿದರು. ಶಾಸಕ ಸ್ಥಾನ ಬಿಟ್ಟರೂ ಚಿಂತಿಲ್ಲ. ಜಿಲ್ಲೆಗೆ ಮಾರಕವಾದ ಈ ಎರಡು ಯೋಜನೆಗಳ ಅನುಷ್ಠಾನಗೊಳ್ಳಲು ಬಿಡುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದರು.

ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ ಈ ಮಾದರಿ ಕಾರ್ಯಕ್ರಮ ರೂಪಿಸಿರುವುದಕ್ಕೆ ಶಾಸಕರನ್ನು ಅಭಿನಂದಿಸಿ ತಾಲ್ಲೂಕಿನ ಪ್ರಗತಿಗೆ ರೂಪಿಸುವ ಎಲ್ಲ ಕಾರ್ಯ ಯೋಜನೆಗಳಿಗೆ ಬಿ.ಜೆ.ಪಿ ವಿರೋಧ ಪಕ್ಷವಾಗಿ ಪೂರ್ಣ ಸಹಕಾರ ನೀಡುತ್ತದೆ ಎಂದರು.

ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಜೇಮ್ಸ ಡಿ'ಸೋಜ ಮತ್ತು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡಿದರು. ತಾಲ್ಲೂಕಿನ 83 ಗ್ರಾಮಗಳಿಂದ ಬಂದ ಸಾರ್ವಜನಿಕರು ಬೇಡಿಕೆಗಳನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.