ADVERTISEMENT

ಭಾವನೆಗಳ ಸಮ್ಮಿಲನದಿಂದ ಬದುಕಿಗೆ ಅರ್ಥ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 9:45 IST
Last Updated 3 ಅಕ್ಟೋಬರ್ 2011, 9:45 IST

ಪುತ್ತೂರು: ಓದು. ಮನನ. ಚಿಂತನೆ ಮತ್ತು ಭಾವನೆಗಳ ಸಮ್ಮಿಲನವಾದಾಗ ಬದುಕಿಗೊಂದು ಅರ್ಥ ಬರುತ್ತದೆ ಎಂದು ಪುತ್ತೂರಿನ ಇಂಡಸ್ ಕಾಲೇಜಿನ ಉಪನ್ಯಾಸಕ ಸೀತಾರಾಮ ಕೆವಳ ಹೇಳಿದರು.ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಗಾಂಧಿ ಮಂಟಪದಲ್ಲಿ ನಡೆದ ಗಾಂಧಿ ಜಯಂತಿ ಮತ್ತು ನಾಗರಿಕ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕೇವಲ ಆಶ್ರಮ ಕಟ್ಟಿಕೊಂಡ ಮಾತ್ರಕ್ಕೆ ಯಾರೂ ಮಹಾತ್ಮರಾಗಲು ಸಾಧ್ಯವಿಲ್ಲ.  ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಜ್ಞಾನವನ್ನು ಇತರರಿಗೆ ಹೇಳುವ ಮತ್ತು ಆ ಮೂಲಕ ಅನುಯಾಯಿಗಳನ್ನು ಸಂಪಾದಿಸುವ ಸಾಮರ್ಥ್ಯವಿದ್ದರೆ ಮಾತ್ರ ಮಹಾತ್ಮರೆನಿಸಲು ಸಾಧ್ಯ ಎಂದು ಅವರು ಹೇಳಿದರು.

ತಾ.ಪಂ. ಅಧ್ಯಕ್ಷ ಶಂಭು ಭಟ್ ಧ್ವಜಾರೋಹಣ ಮಾಡಿದರು. ಉಪವಿಭಾಗಾಧಿಕಾರಿ ಎಂ.ಸುಂದರ ಭಟ್ ಉದ್ಘಾಟಿಸಿದರು.  ಪುರಸಭಾಧ್ಯಕ್ಷೆ ಕಮಲಾ ಆನಂದ್, ಗಾಂಧೀಕಟ್ಟೆ ಸಮಿತಿಯ ಸದಸ್ಯ ಸುಧಾಕರ ಶೆಟ್ಟಿ,  ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ವೇಣುಗೋಪಾಲ್ ಅತಿಥಿಗಳಾಗಿದ್ದರು.

ಗಾಂಧೀಕಟ್ಟೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ  ಕೃಷ್ಣ ಪ್ರಸಾದ್ ಆಳ್ವ, ರಮೇಶ್ ಬಾಬು, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ಡಾ.ದಾಸೇ ಗೌಡ, ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬಿ.ಜೆ.ಸುವರ್ಣ, ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜಕ ಬಿ.ಜೆ.ಬಾಗೇವಾಡಿ, ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಇತರರು ಇದ್ದರು. ಸಮಾರಂಭಕ್ಕೆ ಮೊದಲು ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಮಹಿಳೆಯರಿಂದ ಭಜನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.