ADVERTISEMENT

ಭಾಷೆ ಉಳಿಸಲು ಮುಂದಾಗಿ: ಸೊರಕೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:30 IST
Last Updated 24 ಜನವರಿ 2011, 10:30 IST

ಬ್ರಹ್ಮಾವರ: ಕನ್ನಡ ಭಾಷೆ, ನುಡಿ, ಸಂಸ್ಕೃತಿಯ ಉಳಿವು ಯುವಜನರ ಕೈಯಲ್ಲಿದೆ. ಸಮಾಜ ಮತ್ತು ನ್ಯಾಯದ ಪರವಾಗಿ ಯುವ ಸಂಘಟನೆಗಳು ಹೋರಾಡಿ ನೆಲ-ಜಲ ಸಂಪತ್ತನ್ನು ಉಳಿಸಬೇಕು ಎಂದು ಮಾಜಿ ಸಂಸದ ವಿನಯಕುಮಾರ್ ಸೊರಕೆ ಯುವಜನತೆಗೆ ಕರೆ ನೀಡಿದರು.

ಸಾಲಿಗ್ರಾಮ ರಥಬೀದಿಯ ಡಾ. ಕೋಟ ಶಿವರಾಮ ಕಾರಂತ ವೇದಿಕೆಯಲ್ಲಿ ಜಯಕರ್ನಾಟಕ ಉಡುಪಿ ಜಿಲ್ಲೆಯ ಸಾಲಿಗ್ರಾಮ ಘಟಕದ 3ನೇ ವಾರ್ಷಿಕೋತ್ಸವ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ, ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆಗೆ ಕುತ್ತು ಬಂದಿದೆ. ಸಂಘ-ಸಂಸ್ಥೆಗಳ ಮೂಲಕ ಇದನ್ನು ಸರಿಪಡಿಸುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಯ ಕರ್ನಾಟಕ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಪ್ರೀತಿ, ವಿಶ್ವಾಸ ಸಂಪಾದನೆಗೆ ಹಿರಿಯರ ಮಾರ್ಗದರ್ಶನ ಅಗತ್ಯ. ಭ್ರಷ್ಟ ರಾಜಕಾರಣಿಗಳ ಕಾರಣ ಇಂದು ದೇಶ ಹಾಳಾಗುತ್ತಿದ್ದು, ನಿಷ್ಟಾವಂತ ನಾಯಕರಿಗಾಗಿ ಹೋರಾಟ ನಡೆಸಬೇಕಾಗಿದೆ  ಎಂದರು.

ಕಾರ್ಯಾಧ್ಯಕ್ಷ ಪ್ರಕಾಶ್ ರೈ, ರಾಜ್ಯ ಉಪಾಧ್ಯಕ್ಷ ಎಂ.ಸುದೀಪ್ ಕುಮಾರ್, ಎಸ್‌ಸಿ-ಎಸ್‌ಟಿ ಘಟಕ ಅಧ್ಯಕ್ಷರಾದ ನಾಗಲೇಖಾ, ನೀಲಾವರ ದೇವಸ್ಥಾನದ ಆಡಳಿತ ಮೊಕ್ತೇಸರ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ.ಪಂ. ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ, ಜಿ.ಪಂ.ನ ಶಂಕರ್ ಕುಂದರ್, ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಸತೀಶ್ ಪೂಜಾರಿ, ಗೌರವಾಧ್ಯಕ್ಷ ಧನಂಜಯ ಅಮೀನ್, ಸಾಲಿಗ್ರಾಮ ಘಟಕ ಅಧ್ಯಕ್ಷ ನಾಗರಾಜ ಗಾಣಿಗ, ಗೌರವ ಅಧ್ಯಕ್ಷ ಅಭಿತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಇದ್ದರು.

ಸನ್ಮಾನ: ಕಡಲ ಈಜುಪಟು ಗೋಪಾಲ ಖಾರ್ವಿ, ಉಬ್ಬುಶಿಲ್ಪಿ ಮಂಟಪ ಕೇಶವ ಆಚಾರ್ಯ, ಸುಧೀಂದ್ರ ಐತಾಳ್, ಕ್ರೀಡಾಪಟು ಶ್ರೀಕಾಂತ್ ಐತಾಳ್, ನೃತ್ಯ ಪ್ರವೀಣ ಶರತ್ ಕುಮಾರ್, ಡ್ರಮ್ ವಾದಕ ಅಭಿನವ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಾಲಿಗ್ರಾಮ ಪೇಟೆಯಲ್ಲಿ ಆಕರ್ಷಕ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಯಿತು.

15 ಮಹಿಳೆಯರಿಗೆ ಹೊಲಿಗೆ ಯಂತ್ರ, ಇಬ್ಬರು ಯುವತಿಯರಿಗೆ ಸೈಕಲ್, ಅಂಗವಿಕಲರಿಗೆ ಗಾಲಿಯಂತ್ರ ವಿತರಿಸಲಾಯಿತು.
 
ಹಳ್ಳಿ ಹೈದರು: ಸುವರ್ಣ ವಾಹಿನಿಯ ಹಳ್ಳಿ ಹೈದರಾದ ಮಂಜುನಾಥ್, ಬುಸ್ ನಾಗೇಂದ್ರ, ರಾಜ್‌ಕುಮಾರ್, ಕೇತ ಉಪಸ್ಥಿತಿ ವಿಶೇಷ ಆಕರ್ಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.