ADVERTISEMENT

‘ಭ್ರಷ್ಟನಾಗಿಲ್ಲ, ಹೀಗಾಗಿ ನಿದ್ದೆ ಕಳೆದುಕೊಂಡಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 4:38 IST
Last Updated 4 ಡಿಸೆಂಬರ್ 2017, 4:38 IST
ನ್ಯಾ.ಎನ್‌.ಸಂತೋಷ್‌ ಹೆಗ್ಡೆ
ನ್ಯಾ.ಎನ್‌.ಸಂತೋಷ್‌ ಹೆಗ್ಡೆ   

ಮೂಡುಬಿದಿರೆ: ‘ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಆದರೆ, ಲೋಕಾಯುಕ್ತ ಹುದ್ದೆ ನೀಡಿದಷ್ಟು ತೃಪ್ತಿಯನ್ನು ಬೇರೆ ಯಾವ ಹುದ್ದೆಯೂ ನೀಡಲಿಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಇಲ್ಲಿ ಅಭಿಪ್ರಾಯಪಟ್ಟರು. ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ ‘ಆಳ್ವಾಸ್‌ ನುಡಿಸಿರಿ’ಯ ‘ನನ್ನ ಕತೆ ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ನಾನು ಮಧ್ಯಮ ವರ್ಗದ ಸಮುದಾಯಕ್ಕೆ ಸೇರಿದ ಕುಟುಂಬದಿಂದ ಬಂದವನು. ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ ನನ್ನ ಹುಟ್ಟೂರು. ಇಲ್ಲೀವರೆಗೆ ನನ್ನ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ನಾನೊಬ್ಬ ಅದೃಷ್ಟದ ವ್ಯಕ್ತಿ ಎಂದೇ ಪರಿಗಣಿಸುತ್ತೇನೆ. ಏಕೆಂದರೆ, ನಾನು ಯಾವುದೇ ಒಂದು ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದರೂ ಅದು ನನ್ನ ಕೆಲಸದ ಪ್ರತಿಫಲ ಅಲ್ಲ. ಅದು ಅದೃಷ್ಟದಿಂದ ಬಂದಿದ್ದು ಎಂದು ತಿಳಿದುಕೊಂಡಿದ್ದೇನೆ’ ಎಂದರು.

‘ನಾನು ಮೊದಲಿನಿಂದಲೂ ಹಾಕಿ ಆಟದ ಬಗ್ಗೆ ಕಡು ವ್ಯಾಮೋಹ ಬೆಳೆಸಿಕೊಂಡಿದ್ದೆ. ಹಾಕಿಯಲ್ಲಿ ಮೈಸೂರು ಪ್ರಾಂತ್ಯವನ್ನೂ ಪ್ರತಿನಿಧಿಸಿದ್ದೆ. ನನ್ನ ನಿಜವಾದ ಆಸೆ ಇದ್ದದ್ದು ಒಬ್ಬ ವೃತ್ತಿಪರ ಹಾಕಿ ಆಟಗಾರ ಆಗಬೇಕು ಎಂಬುದೇ ಆಗಿತ್ತು. ಹಾಕಿ ಆಟಗಾರನಾಗಿ ನಿವೃತ್ತಿ ಪಡೆದ ನಂತರ ಹಾಕಿ ತರಬೇತುದಾರ ಆಗಬೇಕೆಂಬ ಆಸೆ ಇತ್ತು. ಆದರೆ, ಆ ಆಸೆಗಳನ್ನು ಪೂರೈಸಿಕೊಳ್ಳಲು ಆಗಲಿಲ್ಲ’ ಎಂದು ಹಾಕಿ ಕ್ರೀಡೆಯ ಬಗ್ಗೆ ತಮಗಿದ್ದ ಪ್ರೀತಿಯನ್ನು ಅವರು ವ್ಯಕ್ತಪಡಿಸಿದರು.

ADVERTISEMENT

‘ಕಾನೂನು ಪದವಿ ಪೂರೈಸಿದ ಬಳಿಕ ಕೆ. ಜಗನ್ನಾಥ್‌ ಶೆಟ್ಟಿ ಎಂಬುವರ ಬಳಿ ಲಾ ಪ್ರಾಕ್ಟೀಸ್‌ ಶುರು ಮಾಡಿದೆ. ಅವರು ನನಗೆ ವೃತ್ತಿಯ ಬಗ್ಗೆ ಸಾಕಷ್ಟು ಹೇಳಿಕೊಟ್ಟರು. 1965ರಿಂದ 70ರವರೆಗೆ ಅಲ್ಲಿ ಪ್ರಾಕ್ಟೀಸ್‌ ಮಾಡಿದೆ. ನನ್ನ ಅದೃಷ್ಟ ಚೆನ್ನಾಗಿತ್ತು. 1970ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದರು. ಆಗ ಅವರು ನನಗೆ ಅವರ ಆಫೀಸ್‌ ಅನ್ನೇ ಬಿಟ್ಟುಕೊಟ್ಟು ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು. ಅಲ್ಲಿಂದ ನನ್ನ ವೃತ್ತಿ ಜೀವನಕ್ಕೆ ದೊಡ್ಡದೊಂದು ತಿರುವು ಸಿಕ್ಕಿತು’ ಎಂದು ತಿಳಿಸಿದರು.

‘1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಯ್ತು. 1975ರ ಜೂನ್‌ 24ರಂದು ನಾಲ್ಕು ಮಂದಿ ಲೋಕಸಭಾ ಸದಸ್ಯರು ಕಾರ್ಯಕ್ರಮದ ನಿಮಿತ್ತ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ಅವರನ್ನು ಅದೇ ರಾತ್ರಿ ಬಂಧಿಸಲಾಗಿತ್ತು. ಅವರೆಲ್ಲರೂ ವಕೀಲರ ಸಹಾಯ ದೊರಕಿಸಿ ಕೊಡಿ ಎಂದು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಆಗ ಮುಖ್ಯ ನ್ಯಾಯಾಧೀಶರು ನನ್ನನ್ನು ಕರೆದು, ‘ಇವರ ಪರವಾಗಿ ವಾದಿಸುತ್ತೀರಾ’ ಎಂದು ಕೇಳಿದರು. ಒಪ್ಪಿಕೊಂಡೆ. ಜೈಲಿನಲ್ಲಿದ್ದ ಸಂಸದರನ್ನು ನೋಡಿ ಒಂದು ಕ್ಷಣ ಅವಾಕ್ಕಾದೆ. ಏಕೆಂದರೆ, ಅಲ್ಲಿದ್ದವರು ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಮಧು ದಂಡವತೆ, ಎಸ್‌.ಎನ್‌ ಮಿಶ್ರಾ. ಆಗ ಅದೇ ಜೈಲಿನಲ್ಲಿ ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ ಕೂಡ ಇದ್ದರು. ಸುಮಾರು 18 ತಿಂಗಳ ಕಾಲ ಅವರ ಒಡನಾಟದಲ್ಲಿ ಇದ್ದೆ. ಅದರಿಂದ ಅವರ ಪರಿಚಯ ಚೆನ್ನಾಗಿ ಆಯ್ತು’ ಎಂದು ಹೇಳಿದರು.

‘1983ರಲ್ಲಿ ಕರ್ನಾಟದಲ್ಲಿ ಒಂದು ದೊಡ್ಡ ಬದಲಾವಣೆ ಆಯ್ತು. ಮೊಟ್ಟ ಮೊದಲಬಾರಿಗೆ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬಂತು. ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಆದರು. ಅವರು ನನ್ನನ್ನು ರಾಜ್ಯದ ಅಡ್ವೊಕೇಟ್‌ ಜನರಲ್‌ ಆಗಿ ನೇಮಕ ಮಾಡಿದರು. ನಾನು ಅತಿ ಬುದ್ಧಿವಂತ ಅಂತ ಅಲ್ಲ. ಹಿಂದೆ ಮಾಡಿದ ಸಹಾಯಕ್ಕೆ ಅವರು ನನ್ನನ್ನು ಅಡ್ವೊಕೇಟ್‌ ಜನರಲ್‌ ಆಗಿ ನೇಮಿಸಿದರು ಎಂದು ತಿಳಿದುಕೊಂಡು ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಆಮೇಲೆ ನನಗೆ ಖಾಸಗಿಯಾಗಿ ಪ್ರಾಕ್ಟೀಸ್‌ ಮಾಡಬೇಕು ಅಂತ ಅನ್ನಿಸಿ ರಾಜೀನಾಮೆ ಕೊಟ್ಟೆ. ಇದಾದ ಎಂಟು ತಿಂಗಳ ನಂತರ ಕೇಂದ್ರದಲ್ಲಿ ಬದಲಾವಣೆ ಆಯ್ತು. ವಿ.ಪಿ.ಸಿಂಗ್‌ ಅವರು ಪ್ರಧಾನಿ ಆದರು. ಅವರು ಸೋನಿ ಸೊರಾಬ್ಜಿ ಅವರನ್ನು ಅಟಾರ್ನಿ ಜನರಲ್‌ ಆಗಿ ನೇಮಕ ಮಾಡಿದರು. ಸೊರಾಬ್ಜಿ ಅವರಿಗೆ ನನ್ನ ಮೇಲೆ ಅಭಿಮಾನ ಇತ್ತು. ನನಗೆ ಕರೆ ಮಾಡಿ, ಅಡಿಷನ್‌ ಸಾಲಿಸಿಟರಿ ಜನರಲ್‌ ಆಫ್‌ ಇಂಡಿಯಾ ಆಗಿ ದೆಹಲಿಗೆ ಬರುವಂತೆ ಸೂಚಿಸಿದರು. ಹೊಸದಾಗಿ ಕಚೇರಿ ತೆರೆದಿದ್ದರೂ ಅವರ ಅಭಿಮಾನಕ್ಕೆ ಕಟ್ಟುಬಿದ್ದು ಅಲ್ಲಿಗೆ ಹೋದೆ’ ಎಂದು ತಿಳಿಸಿದರು.

‘1990ರಿಂದ 95ವರೆಗೆ ದೆಹಲಿಯಲ್ಲೇ ಪ್ರಾಕ್ಟೀಸ್‌ ಮುಂದು ವರಿಸಿದೆ. ನಂತರ, ವಾಜಪೇಯಿ ಅವರು ಪ್ರಧಾನ ಮಂತ್ರಿ ಆದರು. ಅವರು ನನ್ನನ್ನು ಸಾಲಿಸಿಟರಿ ಜನರಲ್‌ ಆಗಿ ನೇಮಕ ಮಾಡಿದರು. ಈ ಹುದ್ದೆ ಅಲಂಕರಿಸಿದವನು ಕರ್ನಾಟದಿಂದ ನಾನೊಬ್ಬನೇ. ನಾನು ಮೇಧಾವಿ ಎಂದು ಅವರು ಈ ನೇಮಕ ಮಾಡಿರಲಿಲ್ಲ. ಹಿಂದೆ ಅವರಿಗೆ ಸಹಾಯ ಮಾಡಿದ್ದೆ ಎಂಬ ಕಾರಣಕ್ಕೆ ನನ್ನನ್ನು ನೇಮಿಸಿದ್ದರು ಎಂದುಕೊಂಡೇ ಎಂಟು ತಿಂಗಳು ಕೆಲಸ ಮಾಡಿದೆ. ಆಮೇಲೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶನಾಗಿ ದುಡಿಯುವ ಅವಕಾಶ ಸಿಕ್ಕಿತು. ಸುಮಾರು ಆರೂವರೆ ವರ್ಷ ನ್ಯಾಯಾಧೀಶನಾಗಿ ಕೆಲಸ ಮಾಡಿದೆ. ಆಮೇಲೆ ಲೋಕಾಯುಕ್ತನಾಗಿ ತಾಯ್ನಾಡಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂತು’ ಎಂದರು.

‘ಲೋಕಾಯುಕ್ತದಂತಹ ಐಉತ್ತಮ ಸಂಸ್ಥೆ ಮತ್ತೊಂದಿಲ್ಲ. ನನಗೆ ಇವತ್ತಿಗೂ ನನ್ನ ವೃತ್ತಿಯಲ್ಲಿ ತುಂಬ ತೃಪ್ತಿ ಕೊಟ್ಟಿದ್ದು ಲೋಕಾಯುಕ್ತ ಹುದ್ದೆ. ಐದು ವರ್ಷದಲ್ಲಿ ಸುಮಾರು 32 ಸಾವಿರ ದೂರುಗಳು ಬಂದಿದ್ದವು. ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ. ಇನ್ನೂ ಬೇಕು ಎನ್ನುವ ದಾಹದಿಂದಲೇ ಬೋಪೋರ್ಸ್‌, 2ಜಿ ಹಗರಣಯಂತಹ ಹಗರಣಗಳು ನಡೆದವು. ಭ್ರಷ್ಟಾಚಾರಕ್ಕೆ ಇವತ್ತು ವ್ಯಕ್ತಿಯನ್ನು ದೂರಿ ಏನೂ ಪ್ರಯೋಜನ ಇಲ್ಲ. ಇಡೀ ಸಮಾಜವನ್ನು ದೂರಬೇಕು. ಹಿಂದೆ ವ್ಯಕ್ತಿ ತಪ್ಪು ಮಾಡಿದರೆ ಸಮಾಜ ಅವನನ್ನು ಬಹಿಷ್ಕರಿಸುತ್ತಿತ್ತು. ಆದರೆ, ಈಗ ಜೈಲಿಗೆ ಹೋಗಿಬಂದ ವ್ಯಕ್ತಿಗೆ ಹಾರ ಹಾಕಿ ಸ್ವಾಗತಿಸುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಈಗಿನ ವ್ಯವಸ್ಥೆಯನ್ನು ಬದಲಿಸುವುದಕ್ಕೆ ನನ್ನ ವಯಸ್ಸಿನವರಿಂದ ಸಾಧ್ಯವಿಲ್ಲ. ಯುವಕರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ 987 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ’ ಎಂದರು.

‘2000ದಿಂದ 2010ರವರೆಗೆ ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ವರದಿ ನೀಡುವಂತೆ ಸರ್ಕಾರ ಅಧಿಕಾರ ಕೊಟ್ಟಿತ್ತು. ವರದಿಯನ್ನೂ ಕೊಟ್ಟೆ. ಅದರಲ್ಲಿ ಮೂರು ಜನ ಮುಖ್ಯಮಂತ್ರಿಗಳು, ಎಂಟು ಜನ ಮಂತ್ರಿಗಳು, ಸುಮಾರು 700ಕ್ಕೂ ಅಧಿಕಾರಿಗಳ ಹೆಸರಿತ್ತು. ಗಣಿಯಲ್ಲಿ ನಡೆದದ್ದು ಅಂತಿಂಥ ಅನ್ಯಾಯ ಅಲ್ಲ. ಒಂದು ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿಗೆ ಅವರು ಸರ್ಕಾರಕ್ಕೆ ಕಟ್ಟುತ್ತಿದ್ದ ರಾಜಧನ ₹27 ಮಾತ್ರ. ಆದರೆ, ಅವರು ಅದನ್ನು ₹6ರಿಂದ ₹7ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇಂದು ರಾಜಕೀಯ ಎನ್ನುವುದು ವೃತ್ತಿ ಆಗಿದೆ. ಸೇವೆ ಅಲ್ಲ. ಲಂಚ ಕೊಟ್ಟರೇ ಇಲ್ಲಿ ಎಲ್ಲ ಕೆಲಸಗಳೂ ಸಲೀಸಾಗಿ ನಡೆಯುತ್ತವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಇದು ನನ್ನ ಜೀವನದ ಕತೆ. ಎಲ್ಲಿಂದಲೋ ಆರಂಭಗೊಂಡು ಇಲ್ಲಿಗೆ ಬಂದು ನಿಂತಿದೆ. ದೊಡ್ಡ ದೊಡ್ಡ ಹುದ್ದೆಗಳನ್ನು ನಿರ್ವಹಿಸಿದ್ದರೂ ಭ್ರಷ್ಟನಾಗಲಿಲ್ಲ. ನನ್ನ ಬಳಿ ಒಂದು ಅಪಾರ್ಟ್‌ಮೆಂಟ್‌ ಬಿಟ್ಟರೆ ಈಗ ಬೇರೇನೂ ಇಲ್ಲ. ಇವನು ಅಧಿಕಾರದಲ್ಲಿದ್ದಾಗ ಸಾಕಷ್ಟು ಹಣ ಮಾಡಿದ್ದಾನೆ, ಆಸ್ತಿ ತೆಗೆದುಕೊಂಡಿದ್ದಾನೆ ಎಂದು ಯಾರೂ ಬೆರಳು ತೋರಿಸದಂತೆ ಬದುಕಿ ತೋರಿಸಿದ್ದೇನೆ. ಆ ತೃಪ್ತಿಯೇ ನನಗೆ ಪ್ರತಿದಿನ ರಾತ್ರಿ ಸುಖ ನಿದ್ದೆಯನ್ನೂ ಕೊಡುತ್ತಿದೆ’ ಎಂದರು.

* * 

ಪ್ರತಿಯೊಬ್ಬರಿಗೂ ಒಂದು ಕನಸಿರಬೇಕು. ದೊಡ್ಡ ಗುರಿ ಇರಬೇಕು. ಕಾನೂನಿನ ಚೌಕಟ್ಟಿನಲ್ಲಿ ಪಡೆದ ಶ್ರೀಮಂತಿಕೆ ಅನುಭವಿಸುವುದು ಏನೇನೂ ತಪ್ಪಿಲ್ಲ.
ಎನ್‌.ಸಂತೋಷ್‌ ಹೆಗ್ಡೆ
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.