ADVERTISEMENT

ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ

ಸಂವಾದದಲ್ಲಿ ಆಸ್ಕರ್‌ ಫರ್ನಾಂಡಿಸ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:10 IST
Last Updated 23 ಸೆಪ್ಟೆಂಬರ್ 2013, 10:10 IST

ಮಂಗಳೂರು: ‘ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಬಗ್ಗೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚಿಸಿದ್ದೇನೆ. ಈ ಕುರಿತ ಸಿದ್ಧತೆಗಳು ನಡೆದಿವೆ’ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್‌ ಫರ್ನಾಂಡಿಸ್‌ ತಿಳಿಸಿದರು.

ರಚನಾ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಬಿಷಪ್‌ ಹೌಸ್‌ನಲ್ಲಿ ಭಾನುವಾರ ನಡೆದ ‘ಕರ್ನಾಟಕ ಕರಾವಳಿ ರಸ್ತೆಗಳ ಅಭಿವೃದ್ಧಿ ಮತ್ತು ಅನು­ದಾನ’ ಕುರಿತ ಸಂವಾದದಲ್ಲಿ ಅವರು ಮಾತ­ನಾಡಿದರು.

‘ಈ ಬಾರಿಯ ರೈಲ್ವೆ ಬಜೆಟ್‌ ಮುಗಿದಿದ್ದು, ಮುಂಬರುವ ಬಜೆಟ್‌ನಲ್ಲಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಒದಗಿಸುವ ಬಗ್ಗೆ ಪೂರ್ವತಯಾರಿ ನಡೆದಿದೆ. ಮಂಗಳೂರು–ಬೆಂಗಳೂರು ನಡುವೆ ಮೀಟರ್ ಗೇಜ್‌ ಮಾರ್ಗ ಇದ್ದಾಗಲೂ ಪ್ರಯಾಣ ಈಗಿನಷ್ಟು ವಿಳಂಬ ಆಗುತ್ತಿರಲಿಲ್ಲ. ಹಾಸನದಿಂದ ಬೆಂಗ­ಳೂರಿಗೆ ನೇರವಾಗಿ ಪ್ರಯಾಣ ಸಾಧ್ಯ­ವಾಗುವಂತೆ ಮಾಡಲು ರೈಲ್ವೆ ಸಚಿವರ ಬಳಿ ವಿನಂತಿಸಿದ್ದೇನೆ. ಇದರಿಂದ ಹಣವೂ ಉಳಿತಾ­ಯವಾಗಲಿದ್ದು, ರೈಲ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದರು.

‘ಕರಾವಳಿಗೆ ಮಾಲಿನ್ಯ ಸೂಸುವ ಕೈಗಾರಿಕೆ­ಗಳು ಬೇಡ. ಆದರೆ, ಸ್ಥಳೀಯರಿಗೆ ಉದ್ಯೋಗಾ­ವಕಾಶ ಬೇಕು. ಈ ಕಾರಣದಿಂದ ಬಿಡಿಭಾಗಗಳ ಕೈಗಾರಿಕೆಯನ್ನು ಇಲ್ಲಿ ಸ್ಥಾಪಿಸುವ ಚಿಂತನೆ ಇದೆ. ಎಂಆರ್‌ಪಿಎಲ್‌ ಅನ್ನು ಇನ್ನಷ್ಟು ವಿಸ್ತರಿಸ­ಲಾಗುತ್ತಿದೆ. ಮಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ರನ್‌ ವೇ ವಿಸ್ತರಣೆಗೆ ಜಾಗ ಒದಗಿಸಿದರೆ, ಅನುದಾನ ಒದಗಿಸಲಾಗು­ವುದು’ ಎಂದರು.
‘ನಂತೂರು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಅಗತ್ಯ ಸೇವೆಗಳ ಕೇಬ­ಲ್‌­ಗಳನ್ನು ಸ್ಥಳಾಂತರ ಮಾಡಿಕೊಟ್ಟರೆ ತಕ್ಷಣ ಕೆಲಸ ಆರಂಭಿಸಲಾಗುವುದು.’ ಎಂದರು.

ಬಿಷಪ್‌ ರೆ.ಫಾ.ಅಲೋಶಿಯಸ್‌ ಪಾವ್ಲ್‌ ಡಿಸೋಜ ಮಾತನಾಡಿ, ‘ರಾಜ್ಯವನ್ನು ಹಾಗೂ ಕರಾವಳಿಯ ಜಿಲ್ಲೆಗಳನ್ನು ಇತರರು ಅಸೂಯೆ ಪಡುವಂತೆ ಅಭಿವೃದ್ಧಿಗೊಳಿಸಬೇಕು’ ಎಂದು ಸಚಿವರನ್ನು ಒತ್ತಾಯಿಸಿದರು.

‘ಚರ್ಚ್‌ಗಳಲ್ಲಿ ರಾಜಕಾರಣಿಗಳಿಗಾಗಿಯೇ ವಾರದಲ್ಲಿ ಒಂದು ಪ್ರಾರ್ಥನೆ ನಡೆಯುತ್ತದೆ. ಇದು ನಿಮಗೂ ಸಲ್ಲುತ್ತದೆ’ ಎಂದು ಅವರು ತಿಳಿಸಿದರು
.
ಕರಾವಳಿಯಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ಸ್ಥಾಪಿಸಬೇಕು. ಸುರತ್ಕಲ್‌ ಎನ್‌ಐಟಿಕೆಯನ್ನು ಐಐಟಿಯಾಗಿ ಮೇಲ್ದರ್ಜೆಗೆ ಏರಿಸಬೇಕು. ಕರಾವಳಿಯನ್ನು ಜ್ಞಾನ ಕೇಂದ್ರವಾಗಿ ರೂಪಿ­ಸಲು ಬೇಕಾದ ಮೂಲಸೌಕರ್ಯ ಒದಗಿಸ­ಬೇಕು. ಕೊಣಾಜೆ ಮತ್ತು ಮಣಿಪಾಲದ ನಡು­ವೆ ಮಾನೋ ರೈಲು ಅಥವಾ ಮೆಟ್ರೋ ರೈಲು ಸ್ಥಾಪಿಸಬೇಕು. ಮಂಗಳೂರಿನಲ್ಲಿ ಕ್ರೀಡಾ ನಗರಿ ಸ್ಥಾಪಿಸಬೇಕು ಇತ್ಯಾದಿ ಸಹಿತ ಶಾಸಕ ಜೆ.ಆರ್‌ ಲೋಬೊ ಅವರು 18 ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

‘ನಂತೂರು, ಪಂಪ್‌ವೆಲ್‌ ಹಾಗೂ ಕೆ.ಪಿ.ಟಿ­ಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು.
ಮಂಗ­ಳೂರು–ಬೆಂಗಳೂರು ಹೆದ್ದಾರಿಯನ್ನು ಮುಂಬೈ­– ಪುಣೆ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಲಕ್ಷದ್ವೀಪ–ಮಂಗಳೂರಿನ ನಡುವೆ  ಹಡಗು ಸಂಚಾರ ಮತ್ತೆ ಆರಂಭಿಸಬೇಕು. ಬಿ.ಸಿ.ರೋಡ್‌–ಪೊಳಲಿ– ಬಜ್ಪೆ–  ಕಿನ್ನಿಗೋಳಿ ಮಾರ್ಗವಾಗಿ ಹಾಗೂ ತೊಕ್ಕೊಟ್ಟು– ಕೊಣಾಜೆ– ಮೆಲ್ಕಾರ್ ಮಾರ್ಗವಾಗಿ ಹೆದ್ದಾರಿಗೆ ಬೈಪಾಸ್‌ ನಿರ್ಮಿಸ­ಬೇಕು’ ಎಂದು ಲೋಬೊ ಒತ್ತಾಯಿಸಿದರು.

ಮಂಗಳೂರು– ಹಾಸನ ನಡುವೆ ಷಟ್ಪಥ ಹೆದ್ದಾರಿ ನಿರ್ಮಾಣ, ಮಂಗಳೂರು ಮತ್ತು ಉಡುಪಿಗೆ ಸುಸಜ್ಜಿತ ಬಸ್‌ನಿಲ್ದಾಣ, ಮೂಡು­ಬಿದಿರೆಯಲ್ಲಿ ಬೈಪಾಸ್‌  ನಿರ್ಮಾಣ, ಏರ್‌ ಕಾರ್ಗೊ ಸಂಕೀರ್ಣ ಅಭಿವೃದ್ಧಿ ಸಹಿತ ಐದು ಅಂಶಗಳ ವಿವಿಧ ಬೇಡಿಕೆಗಳನ್ನು ರಚನಾ ಸಂಸ್ಥೆಯ ರೊನಾಲ್ಡ್‌ ಗೋಮ್ಸ್‌ ಮಂಡಿಸಿ­ದರು.

ಮಂಗಳೂರು ಧರ್ಮಪ್ರಾಂತ್ಯ, ರಚನಾ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು.
ಬ್ಲಾಸಂ ಫರ್ನಾಂಡಿಸ್‌, ವಿಕಾರ್‌ ಜನರಲ್‌ ಡೆನ್ನಿಸ್ ಮೊರಾಸ್‌ ಪ್ರಭು, ‘ರಚನಾ’ ಅಧ್ಯಕ್ಷ ಐವನ್ ಡಿಸೋಜ, ಕಾರ್ಯದರ್ಶಿ ಜಾನ್‌ ಮೊಂತೆ­ರೊ ಮತ್ತಿತರರು ಇದ್ದರು. ವಕೀಲ ಎಂ.ಪಿ.­ನೊರೋನ್ಹ ಅಭಿನಂದನಾ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.