ADVERTISEMENT

ಮಕ್ಕಳ ಓದಿನಿಂದ ಪ್ರಭಾವಿತರಾದ ತಾಯಿ ಗ್ರಂಥಾಲಯ ತೆರೆದರು!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 9:40 IST
Last Updated 7 ಏಪ್ರಿಲ್ 2012, 9:40 IST

ಮಂಗಳೂರು: ಅಮೆರಿಕದಲ್ಲಿದ್ದ ತಾಯಿಯೊಬ್ಬರು ತಮ್ಮಿಬ್ಬರು ಮಕ್ಕಳು ಶಾಲೆಗೆ ಹೋಗಿ ಬಂದ ಮೇಲೆ ಪುಸ್ತಕ ಓದುತ್ತ ಮುಳುಗಿ ಹೋಗುತ್ತಿದ್ದುದನ್ನು ನೋಡುತ್ತಿದ್ದರು. ಚಿಕ್ಕ ವಯಸ್ಸಲ್ಲೇ ಇಷ್ಟು ಓದಿನ ಹವ್ಯಾಸ ತಮ್ಮ ಮಕ್ಕಳಿಗೇ ಇದೆಯಲ್ಲ ಎಂಬ ಅಚ್ಚರಿಯೂ ಆಯಿತು. ಇದು ಅಮೆರಿಕ ಶಿಕ್ಷಣ ಪದ್ಧತಿಯ ಪ್ರಭಾವ.

ತರಗತಿಯಲ್ಲಿ ಪಾಠ ಕೇಳಿ ಮನೆಯಲ್ಲಿ ಕಾಪಿರೈಟಿಂಗ್ ಮಾಡುವುದನ್ನು ಹೇಳಿಕೊಡದೆ ಪುಸ್ತಕ ಓದುವುದನ್ನು ಕಲಿಸುವ ಈ ಪದ್ಧತಿಗೆ ಈಕೆ ಮನಸೋತರು. ಭಾರತಕ್ಕೆ ವಾಪಸು ಬಂದು ಮಕ್ಕಳಿಗೇ ಒಂದು ಗ್ರಂಥಾಲಯ ತೆರೆದೇ ಬಿಟ್ಟರು!

ಇದು ಕೊಂಚ ಕುತೂಹಲ ಕೆರಳಿಸುವ ವಿಚಾರವೇ. ಮಕ್ಕಳಿಗೇ ಒಂದು ಗ್ರಂಥಾಲಯ ಮೀಸಲಾಗಿದೆ ಎನ್ನುವುದೇ ಇಲ್ಲಿ ಅಚ್ಚರಿಯ ವಿಚಾರ. ವಿದೇಶಗಳಲ್ಲಿ ಸಾಮಾನ್ಯವಾದ, ಮಹಾನಗರಗಳಲ್ಲೂ ಇರುವ ಈ ಮಕ್ಕಳ ಗ್ರಂಥಾಲಯ ಮಂಗಳೂರಿಗೆ ಇದೇ ಮೊದಲು. ಮಕ್ಕಳ ಶಿಕ್ಷಣದ ಜತೆಗೆ ಶಿಕ್ಷಣೇತರ ಜ್ಞಾನವನ್ನೂ ಮಕ್ಕಳಿಗೆ ನೀಡುವ ಸಲುವಾಗಿ ರಾಖಿ ರವೀಂದ್ರನ್ ನಗರದಲ್ಲಿ ಈ ಗ್ರಂಥಾಲಯ ಪ್ರಾರಂಭಿಸಿದ್ದಾರೆ.

ಕೊಡಿಯಾಲ್‌ಬೈಲ್‌ನ ಬೆಸೆಂಟ್ ಮಹಿಳಾ ಕಾಲೇಜಿನ ಎದುರಲ್ಲಿ ಸ್ಥಾಪಿಸಲಾಗಿರುವ ಕ್ರಿಸಾಲಿಸ್ ಮಕ್ಕಳ ಗ್ರಂಥಾಲಯ ಅನೇಕ ವಿಶೇಷತೆಗಳಿಂ ಕೂಡಿದೆ. ಅಮೆರಿಕದ ಶಿಕ್ಷಣ ಪದ್ಧತಿಯನ್ನು ಆಳವಾಗಿ ಅಧ್ಯಯನ ಮಾಡಿರುವ ರಾಖಿ, ಅದೇ ಮಾದರಿಯಲ್ಲಿ ಈ ಗ್ರಂಥಾಲಯ ಪ್ರಾರಂಭಿಸಿದ್ದಾರೆ.

ಸಾಂಪ್ರದಾಯಿಕ ಗ್ರಂಥಾಲಯಗಳಲ್ಲಿ ಇರುವಂತೆ ಕೇವಲ ಪುಸ್ತಕ ರಾಶಿ ಇಲ್ಲದೆ, ಇಂಟರ್ನೆಟ್ ಗ್ರಂಥಾಲಯ ನೀಡುವ ಮೂಲಕ ಡಿಜಿಟಲ್ ಗ್ರಂಥಾಲಯ ಶುರು ಮಾಡುವ ಬಗ್ಗೆಯೂ ಇಲ್ಲಿ ಆಧುನಿಕತೆಯ ಮೆರುಗು ನೀಡಲಾಗಿದೆ.

ಬರೋಬ್ಬರಿ 10 ಸಾವಿರ ಗ್ರಂಥ: ಈ ಗ್ರಂಥಾಲಯದಲ್ಲಿ 17 ವರ್ಷ ಒಳಗಿನ ಮಕ್ಕಳು ನೋಂದಾವಣಿ ಮಾಡಿಕೊಳ್ಳುವ ಅವಕಾಶವಿದೆ. ಈ ಮಕ್ಕಳಿಗಾಗಿ ಬರೋಬ್ಬರಿ 10 ಸಾವಿರ ಗ್ರಂಥಗಳು ಇರುವುದು ವಿಶೇಷ. ಆದರೆ ಈ ಪುಸ್ತಕಗಳು ಮಕ್ಕಳ ವಯಸ್ಸಿನ ಇತಿಮಿತಿಗೆ ತಕ್ಕಂತೆಯೇ ಇವೆ. 3 ಮೂರು ವರ್ಷದೊಳಗಿನ ಮಕ್ಕಳಿಗೆ ಕೇವಲ ಚಿತ್ರಗಳಿರುವ ಪುಸ್ತಕಗಳಿವೆ. ಇದರ ಜತೆಗೆ ಚಿತ್ರ ಫಲಕಗಳನ್ನೂ ಮಕ್ಕಳಿಗೆ ನೀಡಿ, ಆ ಚಿತ್ರಗಳನ್ನು ಗುರುತಿಸುವ ಪಾಠ ಕಲಿಸಲು ಸಹಾಯ ಮಾಡಲಾಗುತ್ತದೆ.

17 ವರ್ಷದೊಳಗಿನ ಮಕ್ಕಳಿಗೆ ಸರಳ ಬರವಣಿಗೆ ಇರುವ ಪುಸ್ತಕಗಳನ್ನು ನೀಡಲಾಗುತ್ತದೆ. ಈ ಪುಸ್ತಕಗಳೂ ಮಕ್ಕಳ ಕಲಿಕೆಗೇ ಪೂರಕವಾಗಿರುವುದು ವಿಶೇಷ.

`ಮಕ್ಕಳನ್ನು ಸೃಜನಶೀಲರನ್ನಾಗಿಸುವುದೇ ನಮ್ಮ ಉದ್ದೇಶ. ಕಲಿಕೆ ನೀರಸವಾಗದೇ ಉತ್ಸಾಹದಿಂದ ತುಂಬಿರುವಂತೆ ಮಾಡಲು ಇದು ಪೂರಕ.  ಮಕ್ಕಳ ಕಲಿಕೆಗೆ ಮೂರು ಮುಖ್ಯ ಕ್ಷೇತ್ರಗಳು ಸಹಾಯಕಾರಿ. ಕಲ್ಪನೆ, ಸ್ಫೂರ್ತಿ ಹಾಗೂ ಸಂಪನ್ಮೂಲಗಳ ಲಭ್ಯತೆ. ಇವನ್ನು ಪೂರೈಸುವುದೇ ಈ ಗ್ರಂಥಾಲಯದ ಜವಾಬ್ದಾರಿ~ ಎಂದು ಶುಕ್ರವಾರ ರಾಖಿ ರವೀಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇವಲ ಗ್ರಂಥವೇ ಅಲ್ಲ
ಆದರೆ ಇಲ್ಲಿ ಕೇವಲ ಗ್ರಂಥಗಳು ಮಾತ್ರವೇ ಇಲ್ಲ. ಗ್ರಂಥಗಳ ಜತೆಗೆ ಇಂಟರ್ನೆಟ್ ಕೆಫೆ ಸಹ ಮಕ್ಕಳಿಗೆ ಸಿಗಲಿದೆ. ಇಂಟರ್ನೆಟ್ ಜ್ಞಾನದ ಆಗರವಾಗಿದ್ದು, ಮಕ್ಕಳಿಗೆ ಇದು ಅಗತ್ಯ. ಜತೆಗೆ ತರಾವರಿ ಆಟಿಕೆಗಳೂ ಲಭ್ಯವಿದ್ದು, ಅವನ್ನು ಮನೆಗೆ ಕೊಂಡೊಯ್ಯುವ ವ್ಯವಸ್ಥೆಯನ್ನೂ ಕಲ್ಪಸಲಾಗಿದೆ ಎಂದು ಹೇಳಿದರು. ಗ್ರಂಥಾಲಯಕ್ಕೆ ಪೂರಕವಾದ www.chrysalislab.com ರಚಿಸಿದ್ದು, ಬಳಕೆಯನ್ನು ಮಕ್ಕಳಿಗೆ ಕಲಿಸಲಾಗುತ್ತದೆ.

ಚಾಲನೆ:
ಈ ಗ್ರಂಥಾಲಯಕ್ಕೆ ಇದೇ ಭಾನುವಾರ ಬೆಳಗ್ಗೆ 9.30 ಕ್ಕೆ ತುಳುನಾಡು ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಗ್ರಂಥಾಲಯಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನ್ನು ರೂಪಿಸಲಾಗಿದ್ದು, ಇನ್ಫೋಸಿಸ್‌ನ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಗೋಪಿಕೃಷ್ಣನ್ ಕೊನ್ನಂತ್ ಚಾಲನೆ ನೀಡುವರು. ಗ್ರಂಥಾಲಯದ ಸಲಹೆಗಾರರಾದ ಟಿ. ರಾಮಚಂದ್ರ ಭಟ್, ರವಿಕಿರಣ್ ತೈರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.