ADVERTISEMENT

ಮತದಾನ: ಅಧಿಕಾರಿಗಳಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:24 IST
Last Updated 2 ಏಪ್ರಿಲ್ 2013, 10:24 IST

ಮಂಗಳೂರು: ಜಿಲ್ಲೆಯ ಎಲ್ಲ ಅಧಿಕಾರಿಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಇದಕ್ಕಾಗಿ ಅಂಚೆ ಮತದಾನದ ಬಗ್ಗೆ ಅಧಿಕಾರಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆಯಿತು.

ಸ್ವೀಪ್ ಕಾರ್ಯಕ್ರಮದಡಿ ನಡೆದ ಸಭೆಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಹರೀಶ್ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ, ` ಫಾರ್ಮ್ ನಂಬರ್ 6 ಅನ್ನು ಎಲ್ಲ ಅಧಿಕಾರಿಗಳು ಪಡೆದುಕೊಂಡು ಹೆಸರು ನೋಂದಾಯಿಸಬೇಕು' ಎಂದು ಸೂಚಿಸಿದರು. ಸ್ವೀಪ್ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ `ಎಥಿಕಲ್ ವೋಟಿಂಗ್' ಬಗ್ಗೆ ಮತದಾನ ಮಾಡುವಾಗ ಮನದ ಮಾತಿಗೆ ಮನ್ನಣೆ ಇರಲಿ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸವಿವರ ಚರ್ಚೆ ನಡೆಯಿತು.

ಎಲ್ಲ ಇಲಾಖೆಗಳು ರಶೀದಿ ನೀಡುವಾಗ ಮತದಾನದ ಬಗ್ಗೆ ಮಾಹಿತಿ ನೀಡುವ ಘೋಷವಾಕ್ಯಗಳನ್ನು ಸೀಲ್ ಮಾಡಿ ನೀಡಿ ಎಂದು ಸಲಹೆ ನೀಡಿದರು. ಸಹಕಾರಿ ಸಂಘಗಳು, ಕೆಎಂಎಫ್ ಸಂಸ್ಥೆಯವರು ತಳಮಟ್ಟದ ಗುಂಪುಗಳಲ್ಲಿ ಅರಿವು ಮೂಡಿಸುವಕಾರ್ಯಕ್ರಮ ರೂಪಿಸಬೇಕು ಎಂದರು. ಮತ ಖರೀದಿಸಲು ಸಾಧ್ಯವಿಲ್ಲ. ಯಾವುದೇ ಆಮಿಷಕ್ಕೆ ಒಳಗಾಗದೆ ನಾನು ಮತದಾನ ಮಾಡುತ್ತೇನೆ ಎಂಬ ಅರಿವು ಮೂಡಿಸಲು ಸಾಧ್ಯವಾದರೆ ನಮ್ಮ ಚುನಾವಣಾ ಪ್ರಕ್ರಿಯೆ ಯಶಸ್ವಿಯಾದಂತೆ ಎಂದು ಪಾಲಿಕೆ ಆಯುಕ್ತರು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗೆ 1077 ಸಂಖ್ಯೆಗೆ ದೂರವಾಣಿ ಕರೆ ಮಾಡಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಾಲಭವನದಲ್ಲಿ ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಒಕ್ಕೂಟದ ಮಹಿಳೆಯರಿಗೆ ಅರಿವು ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.