ADVERTISEMENT

ಮತ್ತೆ ನಾಲ್ವರು ಬಾಲ ಕಾರ್ಮಿಕರು ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 10:05 IST
Last Updated 14 ಸೆಪ್ಟೆಂಬರ್ 2011, 10:05 IST

ಮಂಗಳೂರು: ಬೈಕಂಪಾಡಿಯ ಶ್ರೀಚಕ್ರ ಕಂಟೇನರ್ಸ್‌ ಕಂಪೆನಿಯಲ್ಲಿ ಕೆಲಸಕ್ಕಿದ್ದ ನಾಲ್ವರು ಬಾಲ ಕಾರ್ಮಿಕರನ್ನು ಮಂಗಳವಾರ ಪತ್ತೆ ಹಚ್ಚಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಬೋಂದೆಲ್‌ನ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕರೆತಂದಿದ್ದಾರೆ.

ಅಖಿಲ ಭಾರತೀಯ ಕಾರ್ಮಿಕ ಸಂಘದ ದೂರಿನ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಬಿಹಾರ ಮೂಲದ ನಾಲ್ವರು ಬಾಲಕರನ್ನು ಗುರುತಿಸಿದರು. ಆದರೆ ವಯಸ್ಸು ದೃಢೀಕರಿಸುವ ದಾಖಲೆ ಪತ್ರಗಳು ಕಂಪೆನಿಯ ಮಾಲೀಕರ ಬಳಿ ಇರಲಿಲ್ಲ.

ಬಿಹಾರದ ಸಮಷ್ಟಿಪುರ ಜಿಲ್ಲೆ ವಿಭೂತಿಪುರ ಠಾಣಾ ವ್ಯಾಪ್ತಿ ದಿಯಾನಾಥಪುರದ ಮೋತಿಕುಮರ್, ಗಂಗಾರಾಂ ಕುಮಾರ್, ಪಾಜಲ್ ಕುಮಾರ್ ಮತ್ತು ರೋಹಿತ್ ಕುಮಾರ್ ಬಾಲಕಾರ್ಮಿಕ ವ್ಯವಸ್ಥೆಯಿಂದ ಪಾರಾದವರು. ಆಗಸ್ಟ್ 22ರಂದು ಮಂಗಳೂರಿಗೆ ಆಗಮಿಸಿದ್ದ ಬಾಲಕರು, ಹೈಡೆನ್ಸಿಟಿ ಇಥೆಲಿನ್ ಬ್ಯಾಗ್ ತಯಾರಿಸುವ ಈ ಕಂಪೆನಿಯಲ್ಲಿ ನೂಲು ಕತ್ತರಿಸುವ ಕೆಲಸ ಮಾಡುತ್ತಿದ್ದರು.

ಕಾರ್ಮಿಕ ಇಲಾಖೆ ಹಿರಿಯ ನಿರೀಕ್ಷಕ ಜ್ಞಾನೇಶ್, ಯು.ಎಸ್.ದೇಶಪಾಂಡೆ ಮತ್ತು ಸತ್ಯನಾರಾಯಣ ನೇತೃತ್ವದ ತಂಡ ಬಾಲಕರನ್ನು ರಕ್ಷಿಸಿದೆ.

ಬಾಲಕರ ವಯಸ್ಸು ತಿಳಿಯಲು ವೆನ್ಲಾಕ್ ಆಸ್ಪತ್ರೆ ಮೊರೆ ಹೋಗಲಾಗಿದೆ. ಆದರೆ ಅಲ್ಲಿ ಯಂತ್ರ ಕೆಟ್ಟಿದ್ದು, ಸದ್ಯಕ್ಕೆ ವರದಿ ಲಭಿಸುವುದು ಕಷ್ಟವಾಗಿದೆ. ಅಸೈಗೋಳಿಯಲ್ಲಿ ಕಳೆದ ವಾರ ರಕ್ಷಿಸಲಾದ ಬಾಲಕನ ವಯಸ್ಸಿನ ಪರೀಕ್ಷೆಯೂ ಇದೇ ಕಾರಣದಿಂದ ಈವರೆಗೂ ನಡೆದಿಲ್ಲ ಎಂದು ಅಧಿಕಾರಿಯೊಬ್ಬರು `ಅವ್ಯವಸ್ಥೆ~ಯ ಚಿತ್ರಣವನ್ನು ಪ್ರಜಾವಾಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.