ADVERTISEMENT

‘ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ’

ಸುರತ್ಕಲ್: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:03 IST
Last Updated 4 ಮೇ 2018, 11:03 IST

ಸುರತ್ಕಲ್: ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ನೀತಿ, ನೋಟು ರದ್ದತಿ , ಉದ್ಯೋಗ ಕಡಿತ, ಆರ್ಥಿಕ ಪ್ರಗತಿ ಕುಂಠಿತ, ಅಭಿವೃದ್ಧಿಯಲ್ಲಿ ಹಿನ್ನಡೆ ಮುಂತಾದ ಸಮಸ್ಯೆಗಳಿಂದ ಯುವ ಜನತೆ ನಿರುದ್ಯೋಗದ ಭೀತಿ ಎದುರಿಸುತ್ತಿದ್ದಾರೆ. ಇದರಿಂದಾಗಿ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್‌ ಬಾವಾ ಹೇಳಿದರು

ಚೊಕ್ಕಬೆಟ್ಟುವಿನಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಭೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡು ಮಾತನಾಡಿದರು.

ಕೇಂದ್ರ ಸರ್ಕಾರವು ಶ್ರೀಮಂತರ ಪರವಾಗಿದೆ. ಶ್ರೀಮಂತರಿಗೆ ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬಡವರನ್ನು ಮುಖ್ಯವಾಹಿನಿಗೆ ತರುವ ಯಾವುದೇ ಯೋಜನೆಗಳು ಇಲ್ಲ. ಯೋಜನೆಗಳು ಅನುಷ್ಠಾನವಾಗದೆ ಬರಿ ಘೊಷಣೆ ಮತ್ತು ಪ್ರಚಾರ ಮಾತ್ರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಡವರ ಪರ ಸರ್ಕಾರ ಇದೆ. ಬಡವರ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಬಾರದು ಎಂದು ಸುರತ್ಕಲ್ ಸಹಿತ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದೇವೆ. ವಲಸೆ ಕಾರ್ಮಿಕರು, ಬಡವರು ಇಂದು ಹಸಿವಿನಿಂದ ಬಳಲುವ ಪ್ರಶ್ನೆಯೇ ಇಲ್ಲ. ಬಡ ವರ್ಗಕ್ಕೆ ಬಹು ಮಹಡಿ ವಸತಿ ನಿರ್ಮಣ ಮಾಡಿ ಸೂರು ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದರು.

ADVERTISEMENT

ಲಕ್ಷ ಲಕ್ಷ ಉದ್ಯೋಗ ನೀಡಿದ್ದೇವೆ. ಕೇಂದ್ರ ಸರ್ಕಾರ ಮಾತಿನಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಜನ ಸಾಮಾನ್ಯನಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಬ್ಯಾಂಕ್ ಲೂಟಿ ಮಾಡಿ ಶ್ರೀಮಂತರು ಪರಾರಿಯಾಗುತ್ತಿದ್ದಾರೆ. ಆಡಳಿತ ಮಾಡಲಾಗದೆ ದೇಶವನ್ನು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಸಿಕೊಳ್ಳುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಐದು ವರ್ಷದಲ್ಲಿ ಯಾವುದೇ ಜಾತಿ ವೈಷಮ್ಯದ ಗಲಭೆಯಾಗದಂತೆ ನೋಡಿಕೊಂಡಿದ್ದೇನೆ. ಹತ್ಯೆ ಪ್ರಕರಣದ ಸಂದರ್ಭ ಕಾನೂನು ಸುವ್ಯವಸ್ಥೆ ಉತ್ತಮವಾಗಿ ನಿಭಾಯಿಸಿದ್ದೇನೆ.ಇಲ್ಲಿನ ಬಹು ಸಂಖ್ಯಾತರ ಸಹಿತ ಎಲ್ಲರೂ ನನ್ನನ್ನು ಆಶೀರ್ವದಿಸಿ ಕಳುಹಿಸಿದ್ದಾರೆ. ಉತ್ತಮ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದೇನೆ. ರಸ್ತೆ,ಕುಡಿಯುವ ನೀರು, ಆರೋಗ್ಯ ಮತ್ತಿತರ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.

ಕಾಂಗ್ರೆಸ್ ಚುನಾವಣಾ ಉಸ್ತುವಾರಿ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಅವರು ಮೊಯಿದ್ದೀನ್‌ ಬಾವಾ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ₹700 ಕೋಟಿ ಅನುದಾನ ತಂದು ಉತ್ತರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರುವ ಬಗ್ಗೆ ದಾಖಲೆಗಳು ನಮ್ಮಲ್ಲಿ ಇವೆ. ಸುರತ್ಕಲ್, ಗುರುಪುರ ಮತ್ತಿತರ ಪ್ರದೇಶದಲ್ಲಿ ಒಂದಿಷ್ಟು ಸಂಚರಿಸಿದರೆ ಅಮೂಲಾಗ್ರ ಬದಲಾವಣೆ ಕಣ್ಣಿಗೆ ಕಾಣುತ್ತದೆ. ಮತದಾರರೇ ಈ ಬಗ್ಗೆ ಸಾಕ್ಷಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ  ಟೀಕಿಸಲು ಕಾರಣವಿಲ್ಲದೆ ಜಾತಿ,ಧರ್ಮ ಎಂಬ ಹೆಸರಿನಲ್ಲಿ ಸಮಾಜವನ್ನು ಕೆರಳಿಸುವ ವಿಫಲ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಡಾ. ಭರತ್ ಶೆಟ್ಟಿ ಅವರ ಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಿರುವ ಆರೋಪವಿದೆ. ಇಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊಯಿದ್ದೀನ್‌ ಬಾವಾ ಮೇಲೆ ಕಮೀಷನ್ ವ್ಯವಹಾರದ ಕುರಿತು ಆರೋಪ ಮಾಡುವುದು ಶೋಭೆ ತರಲಾರದು. ಇವರ ವೈಯುಕ್ತಿಕ ಜೀವನ ನೋಡಿದರೆ ಅವರು ಈ ಕ್ಷೇತ್ರದ ಮತದಾರರಿಗೆ ನ್ಯಾಯ ಒದಗಿಸಿದ್ದಾರೆ ಎಂದರು.

ಬಿಜೆಪಿಗೆ ಹೊಟ್ಟೆಕಿಚ್ಚು

ಪಚ್ಚೆನಾಡಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಮೊಯಿದ್ದೀನ ಬಾವಾ, ಜಾತಿ ಆಧಾರದಲ್ಲಿ ರಾಜಕೀಯ ಮಾಡುವ ಬುದ್ದಿ ಬಿಜೆಪಿಗೆ ಇದೆ. ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್‌ ಪಕ್ಷವೂ ಮಾಡಿದ ಅಭಿವೃದ್ಧಿ ಕಾಮಗಾರಿ ನೋಡಿ ಬಿಜೆಪಿಯವರಿಗೆ ಹೊಟ್ಟೆ ಊರಿ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.