ADVERTISEMENT

ಮಳೆಯ ನಂತರ ಕಸದ ಪ್ರವಾಹ

ವೇತನಕ್ಕಾಗಿ ಮತ್ತೆ ಪ್ರತಿಭಟನೆಗೆ ಇಳಿದ ಪೌರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:14 IST
Last Updated 16 ಜೂನ್ 2018, 10:14 IST

ಮಂಗಳೂರು: ನಗರದಲ್ಲಿ ಕಳೆದ ಕೆಲ ತಿಂಗಳಿಂದ ಶಾಂತವಾಗಿದ್ದ ಪೌರ ಕಾರ್ಮಿಕರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಪರಿಣಾಮ ರಸ್ತೆಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ಎರಡು ದಿನಗಳಿಂದ ಕಸದ ವಿಲೇವಾರಿಯಾಗದೇ ನಗರದಾದ್ಯಂತ ಕಸದ ಸಮಸ್ಯೆ ಉಲ್ಬಣಿಸುವಂತಾಗಿದೆ.

ನಗರದಲ್ಲಿ ಬುಧವಾರದಿಂದಲೇ ಪೌರ ಕಾರ್ಮಿಕರ ಪ್ರತಿಭಟನೆ ಆರಂಭವಾಗಿದೆ. ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ನ ಕಾರ್ಮಿಕರು ಬುಧವಾರದಿಂದ ಕಸ ಸಂಗ್ರಹ ಮಾಡದೇ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಶಿಯಾಗಿ ರಸ್ತೆಯ ಬದಿಗಳಲ್ಲಿ ಕಸ ಬೀಳುತ್ತಿದ್ದು, ದುರ್ವಾಸನೆ ಕಾಡುತ್ತಿದೆ.

ಕಾರ್ಮಿಕರಿಗೆ ಮಾಸಿಕ ವೇತನ ಸಮರ್ಪಕವಾಗಿ ನೀಡುವವರೆಗೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಆ್ಯಂಟನಿ ಸಂಸ್ಥೆಯ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಆದರೆ, ಇದನ್ನು ನಿರಾಕರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ‘ಆ್ಯಂಟನಿ ಸಂಸ್ಥೆಗೆ ಪಾಲಿಕೆಯಿಂದ ಪಾವತಿಸಲು ಬಾಕಿ ಇರುವ ₹2.10 ಕೋಟಿಯನ್ನು ಗುರುವಾರ ಮಧ್ಯಾಹ್ನವೇ ನೀಡಲಾಗಿದ್ದು, ಶುಕ್ರವಾರದಿಂದ ಕಸ ಸಂಗ್ರಹ ಆರಂಭವಾಗಲಿದೆ’ ಎಂದು ತಿಳಿಸಿದ್ದಾರೆ. ಆದರೆ, ಶುಕ್ರವಾರ ಸಂಜೆಯವರೆಗೂ ಹಲವು ಬಡಾವಣೆಗಳ ಕಸ ವಿಲೇವಾರಿ ಆಗದೇ ಬಾಕಿ ಉಳಿದಿತ್ತು.

ADVERTISEMENT

ಒಂದೆಡೆ ಮಳೆ ಆರಂಭವಾಗಿದ್ದು, ಈ ಮಧ್ಯೆ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿಯಿಂದ ದುರ್ವಾಸನೆ ಬರುತ್ತಿದೆ. ನಗರದ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ತ್ಯಾಜ್ಯ ತುಂಬಿದ್ದು, ತ್ಯಾಜ್ಯವು ಮಳೆ ನೀರಿನೊಂದಿಗೆ ಸೇರಿ ಸ್ಥಳದಲ್ಲಿ ಗಲೀಜು ಹೆಚ್ಚಾಗುತ್ತಿದೆ.

ಶುಕ್ರವಾರ ಬೆಳಿಗ್ಗೆ ಆ್ಯಂಟನಿ ವೇಸ್ಟ್‌ನ ಪ್ರತಿನಿಧಿಗಳ ಜತೆಗೆ ಮಾತನಾಡಿದ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಈಗಾಗಲೇ ಆ್ಯಂಟನಿ ವೇಸ್ಟ್‌ ಕಂಪನಿಗೆ ಪಾಲಿಕೆಯಿಂದ ಕೊಡಬೇಕಿರುವ ಬಾಕಿಯನ್ನು ಪಾವತಿಸಲಾಗಿದೆ. ಕೂಡಲೇ ಕಸ ವಿಲೇವಾರಿಗೆ ಮುಂದಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

‘ಪ್ರತಿ ತಿಂಗಳು ಕಸ ನಿರ್ವಹಣೆ ಮಾಡುವ ಕಾರ್ಮಿಕರ ಸಮಸ್ಯೆಯನ್ನು ಕೇಳುವವರೇ ಇಲ್ಲದಾಗಿದೆ. ತಿಂಗಳಿನ ಸಂಬಳವನ್ನು ನಿಗದಿತ ದಿನಾಂಕದಂದೇ ನೀಡಬೇಕು ಎಂಬ ಬೇಡಿಕೆ ಈಡೇರುವುದೇ ಇಲ್ಲ. ಏಪ್ರಿಲ್‌ ತಿಂಗಳ ಸಂಬಳ ನಮಗೆ ಮೇ 28ಕ್ಕೆ ದೊರಕಿತ್ತು. ಈ ತಿಂಗಳ ಸಂಬಳ ಇದೇ 10ರೊಳಗೆ ಸಿಗಬೇಕಿತ್ತು. ಇನ್ನೂ ಸಿಕ್ಕಿಲ್ಲ. ಕಸ ಸಂಗ್ರಹ ಮಾಡದೆ ಪ್ರತಿಭಟನೆಯ ಮೂಲಕವೇ ನಾವು ನಮ್ಮ ಬೇಸರವನ್ನು ತಿಳಿಸಬೇಕಿದೆ. ಹೀಗಾಗಿ ಗುರುವಾರ ಕಸ ಸಂಗ್ರಹ ನಡೆಸಲಿಲ್ಲ' ಎಂದು ಪೌರ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ಸಂಸ್ಥೆಯಲ್ಲಿ ಸುಮಾರು 600ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸದ್ಯ ಕಂಪನಿಯವರಿಗೆ ಪಾಲಿಕೆ ಹಣ ನೀಡಿದ ಬಗ್ಗೆ ಮಾಹಿತಿ ಇದ್ದು, ಇದು ಕಾರ್ಮಿಕರ ಖಾತೆಗೆ ಹಂಚಿಕೆಯಾದ ಬಳಿಕವಷ್ಟೇ ಕಸ ಸಂಗ್ರಹ ಆರಂಭಿಸಲಿದ್ದೇವೆ’ ಎಂದು ಹೇಳಿದರು.

30 ನೇ ಬಾರಿ ಪ್ರತಿಭಟನೆ

ಮಹಾನಗರ ಪಾಲಿಕೆ ಹಾಗೂ ಕಸ ವಿಲೇವಾರಿ ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ನಡುವಿನ ಗೊಂದಲಗಳಿಂದಾಗಿ ಕಸದ ಸಮಸ್ಯೆ ಪದೇ ಪದೇ ಉಲ್ಬಣಿಸುತ್ತಲೇ ಇದೆ. ಆ್ಯಂಟನಿ ವೇಸ್ಟ್‌ ಕಂಪನಿ ಗುತ್ತಿಗೆ ವಹಿಸಿಕೊಂಡ ನಂತರ ಬರೋಬ್ಬರಿ 30 ನೇ ಬಾರಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ದಿನ ಕಾರ್ಮಿಕರು ಕಸ ವಿಲೇವಾರಿ ನಡೆಸದೆ, ಪ್ರತಿಭಟಿಸಿದ್ದರು. 2016ರಲ್ಲೂ ಇದೇ ರೀತಿ ಕಾರ್ಮಿಕರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಕಸ ಸಂಗ್ರಹ ವ್ಯತ್ಯಯವಾಗಿತ್ತು. ಇನ್ನೂ ಅನೇಕ ಸಂದರ್ಭದಲ್ಲಿ ಇಂತಹ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ, ಕಾರ್ಮಿಕರು ಮುಷ್ಕರ ನಡೆಸುತ್ತಿರುವುದನ್ನು ಅರಿತು ಕೊನೆ ಗಳಿಗೆಯಲ್ಲಿ ಪಾಲಿಕೆಯು ಮಧ್ಯಪ್ರವೇಶಿಸಿ ಬಾಕಿ ಹಣ ಪಾವತಿಗೆ ಮುಂದಾಗುತ್ತದೆ.

ಸೋಮವಾರ ಆ್ಯಂಟನಿ ವೇಸ್ಟ್‌ ಕಂಪನಿಯ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಎಲ್ಲ ವಿಷಯಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು
– ಮಂಜಯ್ಯ ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.