ADVERTISEMENT

ಮುಂಡೂರು: ದಲಿತರ ಪ್ರತಿಭಟನೆ, ಬೇಲಿ ತೆರವು

ದಲಿತ ಮಹಿಳೆಯರಿಬ್ಬರ ಮನೆಯಂಗಳಕ್ಕೆ ತಂತಿ ಬೇಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 5:01 IST
Last Updated 12 ಜೂನ್ 2018, 5:01 IST

ಪುತ್ತೂರು: ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯರಿಬ್ಬರಿಗೆ 94ಸಿ ಅಡಿಯಲ್ಲಿ ಮಂಜೂರುಗೊಂಡ 5ಸೆಂಟ್ಸ್ ಜಾಗದ ಮನೆಯ ಅಂಗಳದಲ್ಲಿಯೇ ತಂತಿ ಬೇಲಿ ಅಳವಡಿಸಿ ಶೌಚಾಲಯಕ್ಕೆ ಹೋಗದಂತೆ ನಿರ್ಬಂಧ ಹೇರಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತ ಅವರನ್ನು ವರ್ಗಾವಣೆ ಮಾಡಬೇಕು ಹಾಗೂ, ತಂತಿ ಬೇಲಿಯನ್ನು ತೆರವುಗೊಳಿಸಿ ಶೌಚಾಲಯ ನಿರ್ಮಿಸಲು ಅವರಿಬ್ಬರಿಗೆ ಕಾಲಾವಕಾಶ ನೀಡಬೇಕು ’ಎಂದು ಆಗ್ರಹಿಸಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯ ನೇತೃತ್ವದಲ್ಲಿ ಸೋಮವಾರ ದಲಿತರು ಪುತ್ತೂರು ತಾಲ್ಲೂಕಿನ ಮುಂಡೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ‘ ದಲಿತರನ್ನು ದಮನಿಸುವ ಕೆಲಸ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಾ ಬಂದಿದೆ. ಬಯಲು ಶೌಚವನ್ನು ಸರ್ಕಾರ ನಿಷೇಧಿಸಿದ್ದರೂ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾವುದೇ ನೋಟಿಸು ನೀಡದೆ, ಶೌಚಾಲಯ ನಿರ್ಮಾಣಕ್ಕೂ ಕಾಲಾವಕಾಶ ನೀಡದೆ, ದಲಿತರಾದ ನಳಿನಿ ಮತ್ತು ರೂಪಾ ಎಂಬವರ ಮನೆಯ ಅಂಗಳಕ್ಕೆ ತಂತಿ ಬೇಲಿ ಹಾಕುವ ಮೂಲಕ ದಲಿತರು ಬಯಲಿನಲ್ಲೇ ಶೌಚ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದು ಆರೋಪಿಸಿದರು.

ಭ್ರಷ್ಟಾಚಾರ ನಿಗ್ರಹ ದಳ-ಅಪರಾಧ ಪತ್ತೆ ದಳ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್ ರೈ ಮಾತನಾಡಿ ಇಲ್ಲಿನ ದಲಿತ ಮಹಿಳೆಯರಿಬ್ಬರುಬದುಕಲು ಜಾಗ ಕೊಡಿ ಎಂದು ಕೇಳುತ್ತಿದ್ದಾರೆ.ಅನ್ಯಾಯ ಮಾಡಬೇಡಿ ಎಂದು ಎಚ್ಚರಿಸಿದರು.

ADVERTISEMENT

ದಲಿತ್ ಸೇವಾ ಸಮಿತಿಯ ತಾಲ್ಲೂಕು ಶಾಖೆಯ ಅಧ್ಯಕ್ಷ ರಾಜು ಹೊಸ್ಮಠ ‘ದಲಿತ ವಿರೋಧಿ ಕೆಲಸ ಮಾಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಏಕಪಕ್ಷೀಯ ನಿರ್ಧಾರವಲ್ಲ: ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ.ವಸಂತ ಮುಂಡೂರು‘ ತಹಶೀಲ್ದಾರ್ ಸೂಚನೆಯಂತೆ 5ಸೆಂಟ್ಸ್ ಮನೆ ನಿವೇಶನಗಳ ಗಡಿಗುರುತು ಮಾಡಿ ಬೇಲಿ ಅಳವಡಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೈಗೊಂಡ ಏಕಪಕ್ಷೀಯ ನಿರ್ದಾರ ಅಲ್ಲ’ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಭಿವೃದ್ಧಿ ಅಧಿಕಾರಿಯವರೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ‘ಇದು ನಾನೊಬ್ಬಳೇ ತೆಗೆದುಕೊಂಡ ನಿರ್ಣಯವಲ್ಲ’ ಎಂದು ಅಭಿವೃದ್ಧಿ ಅಧಿಕಾರಿ ಸುಜಾತ ತಿಳಿಸಿದರು.

ಕಾಲಾವಕಾಶ:  ಶೌಚಾಲಯ ನಿರ್ಮಿಸಲು ಅವರಿಗೆ ಕಾಲಾವಕಾಶ ನೀಡಬೇಕು. ಅಲ್ಲಿಯ ವರೆಗೆ ತಂತಿ ಬೇಲಿ ತೆರವಿಗೆ ಆಗ್ರಹಿಸಿದರು. ಶೌಚಾಲಯ ನಿರ್ಮಿಸಲು ಒಂದು ತಿಂಗಳ ಕಾಲಾವಕಾಶ ನೀಡುವುದಾಗಿ ಪಂಚಾಯಿತಿ ಅಧ್ಯಕ್ಷ ಎಸ್.ಡಿ.ವಸಂತ ಭರವಸೆ ನೀಡಿದರು.  ಪಂಚಾಯಿತಿಯವರೇ ತಂತಿ ಬೇಲಿ ತೆರವುಮಾಡಿ ಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಆಗ್ರಹ ಮತ್ತು ಪಂಚಾಯಿತಿಯವರ ವಾದವನ್ನು ಆಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾಲಾವಕಾಶ ನೀಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದು ತಿಳಿಸಿ ಅಲ್ಲಿಂದ ಹೊರಟರು.

ದಲಿತ್ ಸೇವಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಅಣ್ಣಿ ಏಳ್ತಿಮಾರ್, ಪ್ರಸಾದ್ ಬೊಳ್ಮಾರು, ಪುತ್ತೂರು ತಾಲ್ಲೂಕು ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ತಾಲ್ಲೂಕು ಕಾರ್ಯದರ್ಶಿ ಸಂಕಪ್ಪ ನಿಡ್ಪಳ್ಳಿ, ಮುಖಂಡರಾದ ಅಣ್ಣು ಸಾಧನಾ,ಕೇಶವ ಪಡೀಲು,ಕೃಷ್ಣಪ್ಪ ನಾಯ್ಕ, ಆನಂದ ಮಾಣಿ,ಲೋಕೇಶ್ ತೆಂಕಿಲ, ಹರೀಶ್ ಪಡೀಲು ಉಪಸ್ಥಿತರಿದ್ದರು.

ಬೇಲಿ ತೆರವು-ಸಮಸ್ಯೆ ಪರಿಹಾರ

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಂತಕ್ಕೆ ತಲುಪಿದ ಬಳಿಕ ಪಂಚಾಯಿತಿ ಅಧ್ಯಕ್ಷರು ಹಾಗೂ ದಲಿತ ಮುಖಂಡರು ಸಮಸ್ಯೆಗೊಳಗಾದ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ಮತ್ತು ದಲಿತ ಮುಖಂಡರ ಉಪಸ್ಥಿತಿಯಲ್ಲಿ ಪಂಚಾಯಿತಿ ಸಿಬ್ಬಂದಿ ತಂತಿ ಬೇಲಿ ತೆರವುಗೊಳಿಸಿ ಶೌಚಾಲಯ ಬಳಕೆಗೆ ಅವಕಾಶ ಮಾಡಿಕೊಟ್ಟರು. ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.