ಬದಿಯಡ್ಕ: ಬದಿಯಡ್ಕದಿಂದ ಮುಳ್ಳೇರಿಯಾವರೆಗಿನ 12.5 ಕಿ.ಮೀ. ದೂರದ ಖಾಸಗಿ ಬಸ್ ಸಂಚಾರ ದರವನ್ನು ಆರ್‌ಟಿಒ ಸಂಸ್ಥೆಯು ಕೂಡಲೇ ಪರಿಷ್ಕರಿಸಬೇಕೆಂದು ನಡುವಂಗಡಿಯಲ್ಲಿ ಮಂಗಳವಾರ ನಡೆದ ಬಸ್ ಯಾತ್ರಿಕರ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಬದಿಯಡ್ಕದಿಂದ ಮುಳ್ಳೇರಿಯಾಕ್ಕೆ ಸಂಚರಿಸುವ ಬಹುತೇಕ ಏಕಾಧಿಪತ್ಯದ ಖಾಸಗಿ ಬಸ್ಸುಗಳು ಆದೂರುವರೆಗಿನ ಸಂಚಾರ ದರವನ್ನು ಪಡೆಯುತ್ತಿವೆ. ಹಾಗೂ ನಡುವಂಗಡಿಯಿಂದ ಬದಿಯಡ್ಕಕ್ಕೆ ಕನ್ನೆಪ್ಪಾಡಿಯ ದರವನ್ನು ವಸೂಲು ಮಾಡುತ್ತಿದೆ. ಬಸ್ಸಿನ ಈ ದರದಿಂದ ಪ್ರಯಾಣಿಕರಿಗೆ ಸುಮಾರು ತಲಾ 1.5ಯಿಂದ 2 ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಬಿದ್ದು, ತುಂಬಾ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸರ್ಕಾರಿ ಬಸ್ಸಿನ ದರವೇ ಖಾಸಗಿ ಬಸ್ಸುಗಳಿಗೂ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಬೇಕೆಂದು ಸಮಿತಿ ಒತ್ತಾಯಿಸಿದೆ.
ಬದಿಯಡ್ಕ, ಕುಂಬಳೆ ಮಾರ್ಗವಾಗಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ, ಅಡೂರು ಹಾಗೂ ದೇಲಂಪಾಡಿಯಿಂದ ಬದಿಯಡ್ಕ ಮಾರ್ಗವಾಗಿ ಮಂಗಳೂರಿಗೆ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಹೆದ್ದಾರಿ ರಾಷ್ಟ್ರೀಕರಣದಿಂದ ಸಂಚಾರ ಮೊಟಕುಗೊಂಡ ಬೆಳ್ಳೂರು- ಮಂಗಳೂರು ಖಾಸಗಿ ಬಸ್ಸಿನ ಬದಲಾಗಿ ಸರ್ಕಾರಿ ಬಸ್ಸನ್ನು ಆರಂಭಿಸಬೇಕು.
ಮವ್ವಾರು ಸಮೀಪದ ನಡುವಂಗಡಿ ಸದಾ ಪ್ರಯಾಣಿಕರಿಂದ ಕೂಡಿದ್ದು, ಲಿಮಿಟೆಡ್ ಬಸ್ಸುಗಳ ನಿಲುಗಡೆಯನ್ನು ಘೋಷಿಸಬೇಕು, ಖಾಸಗಿ ಬಸ್ಸುಗಳ ಸಂಚಾರ ದರಗಳನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಸಮಿತಿಯ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಮಂಗಳವಾರ ನಡೆದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಪಣಿಯೆ ಸೀತಾರಾಮ ಕುಂಜತ್ತಾಯ ಚ್ಯವನ ವಹಿಸಿದ್ದರು. ಸಭೆಯಲ್ಲಿ ವಕೀಲ ಚಂದ್ರಹಾಸ ಭಟ್, ಶ್ರೀನಿವಾಸ ಭಟ್, ಪ್ರಭಾಕರ ಮಾಸ್ತರ್, ಸೀತಾರಾಮ ರೈ, ಸುನಿಲ್, ಶ್ರೀಧರ ರಾವ್, ಅನೀಶ್ ಮೊದಲಾದವರು ಇದ್ದರು. ಸಮಿತಿಯು ಬುಧವಾರ ಈ ಬಗ್ಗೆ ಲಿಖಿತ ಮನವಿಯನ್ನು ಆರ್‌ಟಿಒ ಸಭೆಯಲ್ಲಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.