ADVERTISEMENT

ರಾಜಕೀಯ ಇಚ್ಛಾಶಕ್ತಿ ಕೊರತೆ- ಸೊರಗಿದ ಕನ್ನಡ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:25 IST
Last Updated 13 ಅಕ್ಟೋಬರ್ 2011, 5:25 IST

ಪುತ್ತೂರು: ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಮತ್ತು ಇಂಗ್ಲಿಷಿನಲ್ಲಿ ಮಾತನಾಡಿದರೆ ಗೌರವ ಹೆಚ್ಚು ಎಂದು ತಿಳಿದುಕೊಂಡಿರುವ ಅಧಿಕಾರಿ ವರ್ಗದ ನೀತಿಯಿಂದಾಗಿ ಕನ್ನಡ ಭಾಷೆ ಸೊರಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಷಾದಿಸಿದರು.

ಪುತ್ತೂರಿನ ಪುರಭವನದಲ್ಲಿ ಬುಧವಾರ ಸಂಜೆ ನಡೆದ ಕನ್ನಡ ನುಡಿತೇರು ಜಾಗೃತಿ ಜಾಥಾದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತಾತ್ಮಕ ನ್ಯೂನತೆ, ವಿದ್ಯಾಭ್ಯಾಸದ ಅನಾನುಕೂಲತೆಯೂ ಕನ್ನಡದ ಹಿನ್ನಡೆಗೆ ಕಾರಣ. ನಮ್ಮ ದೊಡ್ಡಸ್ಥಿಕೆಯಿಂದ ಭಾಷೆ ಹಾಳಾಗುತ್ತಿದೆ ಎಂದರು.
ಕೇವಲ ಕಾನೂನಿನಿಂದ ಕನ್ನಡದ ಬೆಳವಣಿಗೆ ಸಾಧ್ಯವಿಲ್ಲ. ಕಾನೂನಿನ ಚಾಟಿ ಏಟಿನಿಂದ ಆ ಕೆಲಸವನ್ನು ಮಾಡುವುದೂ ಸೂಕ್ತವಲ್ಲ. ಅರಿವಿನಿಂದ ಮಾತ್ರ ಪರಿವರ್ತನೆ ಸಾಧ್ಯ ಎಂದರು.

ಭಾಷೆ ಸತ್ತು ಹೋದರೆ ಸಮಾಜ ಸಾಯುತ್ತದೆ. ಬದುಕು ಬಾಂಧವ್ಯ ಸಾಯುತ್ತದೆ ಎಂದು ಎಚ್ಚರಿಸಿದ ಅವರು ನಮ್ಮಿಂದಾಗಿ ಬೇರೆ ಭಾಷೆಗಳಿಂದ ಧಕ್ಕೆಯಾಗುವುದು ಬೇಡ. ಆದರೆ ನಮ್ಮ ಭಾಷೆಯ ಮೇಲೆ ದಬ್ಬಾಳಿಕೆ ನಡೆದಾಗ ಸಹಿಸಿ ಸುಮ್ಮನಿರುವುದೂ ಬೇಡ ಎಂದು ಅವರು ತಿಳಿಸಿದರು.

ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡವನ್ನು ತಿರಸ್ಕರಿಸುವವರನ್ನು ನಾವು ಎಂದೂ ಸಹಿಸಬಾರದು. ಮಾತೃಭಾಷೆ, ದೇಶದ ಬಗ್ಗೆ ಅಭಿಮಾನವಿಲ್ಲದವರು ತಮ್ಮತನ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡದ ಬಗ್ಗೆ ಅಭಿಮಾನದ ಜತೆ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಆನಂದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಚಾಲಕರಾದ ಸಾಹಿತಿ ವಿಷ್ಣು ನಾಯಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಮುರಳೀಧರ್, ವಿಧಾನ ಪರಿಷತ್ ಮಾಜಿ ಸದಸ್ಯ ವಿನಯ ಚಂದ್ರ , ಪುತ್ತೂರು ಉಪವಿಭಾಗಾಧಿಕಾರಿ ಸುಂದರ ಭಟ್, ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ರಂಗಕರ್ಮಿ ಐ.ಕೆ.ಬೊಳುವಾರು, ತಾಲ್ಲೂಕು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ, ತಹಸೀಲ್ದಾರ್ ಡಾ.ದಾಸೇ ಗೌಡ, ಧಾರಾವಾಹಿ ಕಲಾವಿದ ನಾಗರಾಜ್ ಮೂರ್ತಿ, ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು, ಪ್ರೊ .ಬಿ.ಜೆ.ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.