ADVERTISEMENT

ರಾಜೇಶ್ ನಾಯ್ಕ ಪರ ಪ್ರಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 9:40 IST
Last Updated 14 ಏಪ್ರಿಲ್ 2013, 9:40 IST

ಬಂಟ್ವಾಳ: `ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ಬದ್ಧರಾಗಿರುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರುವ ಬಿಜೆಪಿ ಮಾತ್ರ ನೈಜ ಕಾರ್ಯಕರ್ತರ ಪಕ್ಷವಾಗಿದೆ' ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ ಹೇಳಿದರು.

ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಎಂಬಲ್ಲಿ ಶನಿವಾರ ನಡೆದ ರಾಯಿ- ಕೊಯಿಲ- ಅರಳ ಗ್ರಾಮ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

`ದೇಶದಲ್ಲಿ ಪ್ರತಿಯೊಬ್ಬರೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಕಾಣುವ ಬಯಕೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡಾ ಬಿಜೆಪಿ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ. ಇದಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು' ಎಂದು ವಿನಂತಿ ಸಿಕೊಂಡರು.

ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮತ್ತು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಿ.ದೇವದಾಸ ಶೆಟ್ಟಿ ಮಾತನಾಡಿ, `ಪ್ರಸಕ್ತ ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಾದ್ಯಂತ ಪ್ರತಿಯೊಂದು ಮನೆಗೂ ವಿವಿಧ ಸೌಲಭ್ಯಗಳು ದೊರೆತಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.

ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಭೋಜರಾಜ ಶೆಟ್ಟಿ, ಹಿರಿಯ ಮುಖಂಡ ಕೈಯೂರು ನಾರಾಯಣ ಭಟ್, ತಾ.ಪಂ.ಸದಸ್ಯರಾದ ವಸಂತ ಕುಮಾರ್ ಅಣ್ಣಳಿಕೆ, ರಮೇಶ ಕುಡ್ಮೇರು, ವಿನಯ ನಾಯಕ್, ಮಾಜಿ ಸದಸ್ಯ ರತ್ನಕುಮಾರ್ ಚೌಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.