ADVERTISEMENT

`ರಿಕ್ಷಾ ಚಾಲಕರ ಸಾಮರಸ್ಯ ಕದಡಿದ ಸಚಿವರು'

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 9:52 IST
Last Updated 13 ಜುಲೈ 2013, 9:52 IST
ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶವನ್ನು ತಡೆಯುವಂತೆ ಆಗ್ರಹಿಸಿ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಸಾರಿಗೆ ಅಧಿಕಾರಿಗಳಿಗೆ ಮಾಡಿರುವ ಆದೇಶವನ್ನು ವಿರೋಧಿಸಿ ಶುಕ್ರವಾರ ಮಂಗಳೂರು ನಗರದ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.	-ಪ್ರಜಾವಾಣಿ ಚಿತ್ರ
ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶವನ್ನು ತಡೆಯುವಂತೆ ಆಗ್ರಹಿಸಿ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಸಾರಿಗೆ ಅಧಿಕಾರಿಗಳಿಗೆ ಮಾಡಿರುವ ಆದೇಶವನ್ನು ವಿರೋಧಿಸಿ ಶುಕ್ರವಾರ ಮಂಗಳೂರು ನಗರದ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. -ಪ್ರಜಾವಾಣಿ ಚಿತ್ರ   

ಮಂಗಳೂರು: ಮಂಗಳೂರು ನಗರದಲ್ಲಿ ಆರೇಳು ಸಾವಿರ ಆಟೊರಿಕ್ಷಾಗಳಿದ್ದರೆ ಗ್ರಾಮಾಂತರ ಪ್ರದೇಶದಲ್ಲಿ 20 ಸಾವಿರಕ್ಕೂ ಅಧಿಕ ಇವೆ. ಅವುಗಳಿಗೆ ನಗರ ಪ್ರವೇಶಿಸಲು ಅನುಮತಿ ನೀಡಿದಲ್ಲಿ ನಗರದ ಸಂಚಾರ ವ್ಯವಸ್ಥೆ ಏರುಪೇರಾಗುವುದಲ್ಲದೆ ರಿಕ್ಷಾಚಾಲಕರ ಆದಾಯದ ಮೇಲೂ ಹೊಡೆತ ಬೀಳಲಿದೆ ಎಂದು ದಕ್ಷಿಣ ಕನ್ನಡ ಆಟೊರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಿ. ವಿಷ್ಣುಮೂರ್ತಿ ಹೇಳಿದರು.

ಗ್ರಾಮಾಂತರ ಆಟೊರಿಕ್ಷಾಗಳಿಗೆ ನಗರ ಪ್ರವೇಶಿಸಲು ಅನುಮತಿ ನೀಡುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಸಾರಿಗೆ ಅಧಿಕಾರಿಗಳಿಗೆ ಆದೇಶ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ನಗರ ಆಟೊ ರಿಕ್ಷಾ ಚಾಲಕರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಂಗಳೂರು ತಾಲ್ಲೂಕಿನಾದ್ಯಂತ ಓಡಾಡಲು ಆಟೊರಿಕ್ಷಾಗಳಿಗೆ ನೀಡಲಾದ ಪರ್ಮಿಟ್‌ಗಳ ಮೇಲೆ 1997ರಲ್ಲಿ ನಿರ್ಬಂಧ ಹೇರಲಾಗಿತ್ತು. ನಂತರ ಗ್ರಾಮಾಂತರ ರಿಕ್ಷಾಗಳನ್ನು ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿ, ನಗರ ರಿಕ್ಷಾಗಳನ್ನು ಮಂಗಳೂರು ನಗರಕ್ಕೆ ಸೀಮಿತವಾಗಿ ಓಡಿಸಲು ನಿರ್ಧರಿಸಲಾಗಿದೆ. ಆದರೆ ಈಗ ಆರೋಗ್ಯ ಸಚಿವ ಯು. ಟಿ. ಖಾದರ್ ತಮ್ಮ ಓಟ್ ಬ್ಯಾಂಕ್ ಒಲಿಸಿಕೊಳ್ಳಲು ಗ್ರಾಮೀಣ ರಿಕ್ಷಾಗಳಿಗೆ ನಗರ ಪ್ರವೇಶಿಸಲು ಅನುಮತಿ ನೀಡಲು ಸೂಚಿಸಿದ್ದಾರೆ. ಇದು ಜಿಲ್ಲಾಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಆಟೊರಿಕ್ಷಾ ಚಾಲಕರ ಅಧ್ಯಕ್ಷ ಅಲಿಹಸನ್ ಮಾತನಾಡಿ ಆರೋಗ್ಯ ಸಚಿವರಾಗಿರುವ ಖಾದರ್, ಸಾರಿಗೆ ಇಲಾಖೆಯಲ್ಲಿ, ಉಸ್ತುವಾರಿ ವಿಭಾಗದಲ್ಲಿ ಹಸ್ತಕ್ಷೇಪ ಮಾಡಿರುವುದಲ್ಲದೆ ರಿಕ್ಷಾ ಚಾಲಕರ ಸಾಮರಸ್ಯ ಕದಡಿ, ರೋಗ ಹರಡಿದ್ದಾರೆ ಎಂದರು. ರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರಾದ ಪೌಲ್ ಡಿಸೋಜ, ಆಶೋಕ್ ಶೆಟ್ಟಿ, ಅಬೂಬಕ್ಕರ್ ಸುರತ್ಕಲ್, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಕುಮಾರ್ ಇದ್ದರು.

ರಿಕ್ಷಾ ಚಾಲಕರ 10 ಬೇಡಿಕೆಗಳನ್ನು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಗೆ ಮುನ್ನ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಟೊ ಚಾಲಕರ ಮೆರವಣಿಗೆ ನಡೆಯಿತು.

ಆಕ್ಷೇಪಗಳು
* ಗ್ರಾಮಾಂತರ ಸಂಚಾರಕ್ಕೆ ಇರುವ ಪರ್ಮಿಟ್‌ಗಳನ್ನು ಏಕಪಕ್ಷೀಯವಾಗಿ ಬದಲಾಯಿಸಬಾರದು.

* ನಗರ ಪ್ರದೇಶ ಪ್ರವೇಶಕ್ಕೆ ಅನುಮತಿ ನೀಡಿದರೆ ಗ್ರಾಮಾಂತರ ಮಟ್ಟದಲ್ಲಿ ಪರವಾನಗಿ ಪಡೆಯುವವರ ಸಂಖ್ಯೆ ಜಾಸ್ತಿಯಾಗುತ್ತದೆ. ವಲಯಗಳನ್ನು ನಿರ್ಮಿಸಿದ ಉದ್ದೇಶವೇ ಹಾಳಾಗುತ್ತದೆ. ಆದ್ದರಿಂದ ಹಳೇ ಕ್ರಮವೇ ಮುಂದುವರೆಯಬೇಕು.

* ಹೊರಗಿನಿಂದ ರಿಕ್ಷಾಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಸಂಚಾರ ಏರುಪೇರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.