ಮಂಗಳೂರು: ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿ ಯೋಗೀಶನ ಸಹಚರರಿಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು 1 ಲಕ್ಷ ರೂಪಾಯಿ ಹಫ್ತಾ ಹಣ ಹಾಗೂ ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಸಮೀಪದ ಮುಚ್ಚೂರಿನ ತಾರಾನಾಥ (40) ಹಾಗೂ ಸುಬ್ರಹ್ಮಣ್ಯ ಯಾನೆ ಸುಬ್ಬು (25) ಬಂಧಿತರು.ಈ ಕುರಿತು ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್, `ರವಿ ಪೂಜಾರಿ ಹಾಗೂ ಕಲಿ ಯೋಗೀಶ ನಗರದ ಉದ್ಯಮಿಗಳನ್ನು ಹಫ್ತಾ ನೀಡುವಂತೆ ಬೆದರಿಸುತ್ತಿದ್ದರು.
ಹಫ್ತಾ ಹಣವನ್ನು ಪಿ.ವಿ.ಎಸ್ ವೃತ್ತದ ಬಳಿ ತಾರಾನಾಥ ನಡೆಸುತ್ತಿರುವ `ಮಿಲ್ಕ್ ವೇ~ ಹಾಲಿನ ಬೂತ್‌ಗೆ ಕಳುಹಿಸಲು ತಿಳಿಸುತ್ತಿದ್ದರು. ಬುಧವಾರ ಉದ್ಯಮಿಯೊಬ್ಬರು 1ಲಕ್ಷ ರೂಪಾಯಿ ಹಫ್ತಾವನ್ನು ಹಾಲಿನ ಬೂತ್‌ಗೆ ತಲುಪಿಸಿದ ಬಗ್ಗೆ ಮಾಹಿತಿ ಇತ್ತು. ಈ ಆಧಾರದಲ್ಲಿ ಸಿಸಿಬಿ ಪೊಲೀಸರು ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ~ ಎಂದು ಅವರು ತಿಳಿಸಿದರು.
ವಕೀಲ ನೌಷದ್ ಖಾಸಿಂಜಿ ಹತ್ಯೆಯಲ್ಲೂ ಆರೋಪಿಯಾಗಿದ್ದ ಆರೋಪಿ ಸುಬ್ರಹ್ಮಣ್ಯ ಒಂದೂವರೆ ವರ್ಷ ಜೈಲುವಾಸವನ್ನೂ ಅನುಭವಿಸಿದ್ದ. ಖಾಸಿಂಜಿ ಹತ್ಯೆಗೆ ಬಳಸಿದ್ದ ಮೂರು ರಿವಾಲ್ವರ್‌ಗಳನ್ನು ಆತ ಕೆ.ಎಸ್.ರಾವ್ ರಸ್ತೆಯಲ್ಲಿ ಹೊಂದಿದ್ದ ಕ್ಷೌರದಂಗಡಿಯಿಂದ ವಶಪಡಿಸಿಕೊಳ್ಳಲಾಗಿತ್ತು.
ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆತ ಹಫ್ತಾ ವಸೂಲಿ ಹಾಗೂ ಹವಾಲ ಜಾಲದಲ್ಲಿ ತೊಡಗಿಸಿಕೊಂಡಿದ್ದ ಎಂದ ಅವರು ತಿಳಿಸಿದರು. ಗೋಷ್ಠಿಯಲ್ಲಿ ಡಿಸಿಪಿ ಮುತ್ತೂರಾಯ ಹಾಗೂ ಧರ್ಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.