ADVERTISEMENT

ರೈತ ಸಂಘದಿಂದ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 8:45 IST
Last Updated 7 ಜನವರಿ 2012, 8:45 IST

ಪುತ್ತೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಯಿತು.

ಅಡಿಕೆ ಕೊಳೆರೋಗ ಮತ್ತು ಹಳದಿ ರೋಗದ ಬಗ್ಗೆ ವಿಶೇಷ ಪ್ಯಾಕೇಜ್ ನೀಡುವ ವಿಚಾರದಲ್ಲಿ  ತೋಟಗಾರಿಕಾ ಇಲಾಖೆಯು ಕೇವಲ ರೈತರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. ರೈತರಿಂದ ಸ್ವೀಕರಿಸಿದ ಪರಿಹಾರದ ಅರ್ಜಿಗಳು ಇಲಾಖೆಯ ಕೋಣೆಯಲ್ಲಿ ದೂಳು ತಿನ್ನುತ್ತಿವೆ. ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಕೂಡ ನಡೆದಿಲ್ಲ. ಕುಮಾರಧಾರಾ ಅಣೆಕಟ್ಟು ನಿರ್ಮಾಣದಿಂದಾಗಿ ಕೃಷಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡುವ ಮೊದಲೇ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದೆ. ರೈತರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದನವೇ ಇಲ್ಲ  ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತರ ಎಲ್ಲಾ ಕೃಷಿ ಸಾಲ ಮನ್ನಾ ಮಾಡಬೇಕು. ಅಡಿಕೆ ಬೆಳೆಗಾರರಿಗೆ ಪುನರ್ವಸತಿ ಪ್ಯಾಕೇಜ್ ನೀಡಬೇಕು. ಕೃಷಿ ಅನುಬಂಧಿತ ಕುಮ್ಕಿ, ಕಾಣೆ, ಬಾಣೆ  ಭೂಮಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿವರೆಗೆ  ಕುಮಾರಧಾರಾ ಅಣೆಕಟ್ಟು ಮತ್ತು ವಿದ್ಯುತ್ ಪ್ರಸರಣಾ ಮಾರ್ಗದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ  ಪ್ರಸಕ್ತ ಮಾರುಕಟ್ಟೆ ದರದ 5 ಪಟ್ಟು ಬೆಲೆ ನೀಡಿದ ನಂತರವೇ ಕಾಮಗಾರಿ ಆರಂಭಿಸಬೇಕು. ಪ್ರಕೃತಿ ಮತ್ತು ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾಗಲಿರುವ ಪುಷ್ಪಗಿರಿ ವನ್ಯಧಾಮ ಯೋಜನೆಯನ್ನು ಕೈಬಿಡಬೇಕು. ಕೃಷಿ ಉತ್ಪನ್ನಗಳಿಗೆ ಕಾಲಕ್ಕೆ ಸರಿಯಾಗಿ ಮತ್ತು ಉತ್ಪಾದನಾ ವೆಚ್ಚಕ್ಕನುಗುಣವಾಗಿ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪುತ್ತೂರಿನ ಬಸ್ ನಿಲ್ದಾಣದ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಹಿರಿಯ ರೈತ ಮುಖಂಡ ಮುರುವ ಮಹಾಬಲ ಭಟ್ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಚರ್ಚ್‌ನ ಧರ್ಮಗುರು ಜೆರಾಲ್ಡ್ ಡಿಸೋಜ ಅವರು ರೈತರನ್ನು ರಕ್ಷಿಸಬೇಕಾದ ಸರ್ಕಾರಗಳು ರೈತರನ್ನು ಶೋಷಿಸುತ್ತಿರುವುದು ವಿಷಾದನೀಯ ಎಂದರು.

ಆತೂರು ಮಸೀದಿಯ ಅಸ್ಸಯ್ಯದ್ ಇಬ್ರಾಹಿಂ ಹಾದಿ ತಂಙಳ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಗಳ ವಿರುದ್ಧ ಧ್ವನಿ ಎತ್ತುವ ಕೆಲಸ ನಿರಂತರವಾಗಿ ನಡೆಯಬೇಕು. ಈ ಹೋರಾಟಕ್ಕೆ ಜಾತಿ,ಮತ, ಬೇಧವಿಲ್ಲದೆ ಎಲ್ಲಾ ರೈತರು ಬೆಂಬಲ ನೀಡಬೇಕು ಎಂದರು.

ರಾಜ್ಯ ರೈತ ಸಂಘ, ಹಸಿರು ಸೇನೆಯ ಹಾಸನ ಜಿಲ್ಲೆಯ ಮುಖಂಡ ಕಣಗಾಲ್ ಮೂರ್ತಿ, ಹಾಸನ ಜಿಲ್ಲಾ ಕಾರ್ಯದರ್ಶಿ ಮಲ್ಲೇಶ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಎನ್.ನಿಡ್ವಣ್ಣಾಯ, ಕಾಂಗ್ರೆಸ್ ಮುಖಂಡ ಬೊಂಡಾಲ ಜಗನ್ನಾಥ ಶೆಟ್ಟಿ, ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ. ಕುಂಬ್ರದ ಮಹಮ್ಮದ್ ಹಾಜಿ ಮತ್ತಿತತರು ಬೆಂಬಲ ಸೂಚಿಸಿದರು.

 ದ.ಕ. ಜಿಲ್ಲಾ ಸಂಘಟನಾ ಸಂಚಾಲಕ ಬಿ. ಶ್ರೀಧರ್ ಶೆಟ್ಟಿ ಬೈಲುಗುತ್ತು, ಉಪ್ಪಿನಂಗಡಿ ವಲಯಾಧ್ಯಕ್ಷ ಈಶ್ವರ ಭಟ್ ಬಡಿಲ, ರಾಜ್ಯ ಸಮಿತಿ ಸದಸ್ಯ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಸವಣೂರು ವಲಯಾಧ್ಯಕ್ಷ ಲಕ್ಷ್ಮೀಶ ಗಾಂಭೀರ, ಸವಣೂರು ವಲಯದ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ, ಹಸಿರು ಸೇನೆಯ ತಾಲ್ಲೂಕು ಸಂಚಾಲಕ ರೂಪೇಶ್ ರೈ ಅಲಿಮಾರ್, ಕುಮಾರಧಾರ ಹೋರಾಟ ಸಮಿತಿಯ ಅಧ್ಯಕ್ಷ ವಾಸುದೇವ ಇಡ್ಯಾಡಿ ಮತ್ತಿತರರು ಇದ್ದರು.

ಜ.20ರಂದು ಸಭೆ: ಇದೇ ಜನವರಿ 20 ರಂದು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ರೈತ ಮುಖಂಡರ ಮತ್ತು ಕುಮಾರಧಾರಾ ಹೋರಾಟ ಸಮಿತಿಯ ಸಭೆ ಕರೆದು ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರ್ ದಾಸೇಗೌಡ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.