ADVERTISEMENT

ವಿಟ್ಲ: ರಸ್ತೆಯಲ್ಲೇ ಕೃತಕ ಪ್ರವಾಹ

ಚುನಾವಣೆ: ಚರಂಡಿ ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:54 IST
Last Updated 17 ಮೇ 2018, 5:54 IST
ನನೆಗುದಿಗೆ ಬಿದ್ದಿರುವ ಚರಂಡಿ ಕಾಮಗಾರಿ.
ನನೆಗುದಿಗೆ ಬಿದ್ದಿರುವ ಚರಂಡಿ ಕಾಮಗಾರಿ.   

ವಿಟ್ಲ: ‘ಚುನಾವಣೆ, ನೀತಿ ಸಂಹಿತೆ ಮೊದಲಾದ ಕಾರಣಗಳಿಂದ ವಿಟ್ಲ ಚರಂಡಿ ಕಾಮಗಾರಿ ನನೆಗುದಿಗೆ ಬಿದ್ದಿದೆ.  ಮಳೆ ಬಂದಿದೆ. ಆಗಾಗ ಮತ್ತಷ್ಟು ಮಳೆ ಸುರಿಯುವ ವಾತಾವರಣವಿದೆ.  ಚರಂಡಿಯ ಅರೆಬರೆ ಕಾಮಗಾರಿಯ ಪರಿಣಾಮ ರಸ್ತೆಯಲ್ಲೇ ಕೃತಕ ಪ್ರವಾಹ ಉಂಟಾಗುತ್ತಿದೆ’ಎಂದು ವ್ಯಾಪಾರಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಚರಂಡಿ ಸಮಸ್ಯೆ ಹಳೆಯದೇ: ವಿಟ್ಲ ಪೇಟೆಯ ಚರಂಡಿ ಅವ್ಯವಸ್ಥೆ ಇಂದು, ನಿನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ಪರಿಹರಿಸಲಾಗದೇ ಉಳಿದಿರುವ, ಅತ್ಯಂತ ಅವಶ್ಯವಾಗಿರುವ ಚರಂಡಿ ಕಾಮಗಾರಿ ಪೂರ್ತಿಯಾಗದೇ ಇರುವುದಂತೂ ನಿತ್ಯಸತ್ಯ. ವಿಟ್ಲ ಜಂಕ್ಷನ್‌ನಿಂದ ಮಂಗಳೂರು ರಸ್ತೆ ಮತ್ತು ಅರಮನೆ ರಸ್ತೆಯ ಚರಂಡಿಗಳು ದುರಸ್ತಿಯಲ್ಲೇ ಇದ್ದರೆ, ಜಂಕ್ಷನ್‌ನಲ್ಲಿ ಚರಂಡಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿ ಉಳಿದುಬಿಟ್ಟಿದೆ.

ವಿಟ್ಲ–ಪುತ್ತೂರು ರಸ್ತೆ ಮತ್ತು ಶಾಲಾ ರಸ್ತೆಯ ಚರಂಡಿ ಕಾಮಗಾರಿ ನಡೆದಾಗ ಜಂಕ್ಷನ್‌ನಲ್ಲಿ ಅಂಗಡಿಗಳಿದ್ದವು. ಅಂಗಡಿಗಳು ತೆರವಾದ ಬಳಿಕವೂ ಆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಶಾಲಾ ರಸ್ತೆಯ ಪೊಲೀಸ್ ಸ್ಟೇಷನ್ ಬಳಿಯಲ್ಲಿ ಚರಂಡಿ ಕಾಮಗಾರಿಯೂ ಪೂರ್ತಿಯಾಗಿಲ್ಲ. ಅರ್ಧಕ್ಕೇ ಉಳಿದ ಕಾಮಗಾರಿಯ ಪರಿಣಾಮ, ರಸ್ತೆ ಬದಿಯಲ್ಲಿ ಚರಂಡಿಯ ದುಷ್ಪರಿಣಾಮಗಳು ನಾಗರಿಕರನ್ನು ಬಾಧಿಸುತ್ತವೆ. ನೀರು ಚರಂಡಿಗಿಳಿಯದೇ ರಸ್ತೆಯಲ್ಲೇ ಹರಿಯುತ್ತದೆ. ಪರಿಣಾಮವಾಗಿ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಜತೆಗೆ ಉಳಿದೆಲ್ಲೆಡೆಯ ಕಸಕಡ್ಡಿಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ರಸ್ತೆಗೇ ಬರುತ್ತವೆ.

ADVERTISEMENT

ಅರಮನೆ ರಸ್ತೆ ಚರಂಡಿ :  ಅರಮನೆ ರಸ್ತೆ ಮತ್ತು ಮಂಗಳೂರು ರಸ್ತೆಯಲ್ಲಿ ಚರಂಡಿಗಳ ಸ್ಲಾಬ್‌ಗಳು ಮುರಿದು ಬೀಳುವ ಹಂತದಲ್ಲಿವೆ. ಕೆಲವು ಮುರಿದುಬಿದ್ದಿವೆ. ಅಲ್ಲದೇ ಹೂಳು ತುಂಬಿಕೊಂಡಿದೆ. ರಸ್ತೆ ಬದಿಯ ವ್ಯಾಪಾರಿಗಳು ಮೂಗು ಮುಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ರಸ್ತೆ ವಿಸ್ತರಣೆಯ ಜತೆ ಆರಂಭವಾದ ಚರಂಡಿ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ. ಈಗ ಇರುವ ಸ್ಲಾಬ್‌ಗಗಳು ಹತ್ತಾರು ವರ್ಷ ಹಳೆಯವು. ಚಿಕ್ಕ ವಾಹನ ಸಂಚರಿಸಿದರೂ ಅವುಗಳು ಕುಸಿಯುವ ಸಂಭವವಿದೆ.

ಚರಂಡಿ ಅಭಿವೃದ್ಧಿ : ಕಳೆದ ವರ್ಷ ಲೋಕೋಪಯೋಗಿ ಇಲಾಖೆ ಅನೇಕ ಕಡೆಗಳಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮಾಡಿತ್ತು. ರಸ್ತೆಗೆ ಹೆಚ್ಚು ಹಾನಿಯಾಗಲಿಲ್ಲ. ಈ ಬಾರಿ ಚುನಾವಣೆಯೇ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.