ADVERTISEMENT

ವಿಧಾನಸಭೆಯಲ್ಲಿ ಕರಾವಳಿ ಮಹಿಳೆಯರಿಲ್ಲ!

ಮಾತೃಪ್ರಧಾನ ಸಂಪ್ರದಾಯದ ಕರಾವಳಿಯ ಅಚ್ಚರಿ

ಕೋಡಿಬೆಟ್ಟು ರಾಜಲಕ್ಷ್ಮಿ
Published 19 ಮೇ 2018, 6:29 IST
Last Updated 19 ಮೇ 2018, 6:29 IST

ಮಂಗಳೂರು: ಹೆಚ್ಚು ಸಾಕ್ಷರರನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹಿಳೆಯರ ಸಂಖ್ಯೆ ಅತೀ ಕಡಿಮೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ ಮಹಿಳೆಯರು ವಿಧಾನ ಸಭೆ ಪ್ರವೇಶಿಸುವುದು ಸಾಧ್ಯವಾಗಿಲ್ಲ.

ಮಾತೃ ಪ್ರಧಾನವಾದ ಅಳಿಯಕಟ್ಟು ಸಂಸ್ಕೃತಿಯ ಹೆಗ್ಗಳಿಕೆ ಕರಾವಳಿಗೆ ಇದ್ದರೂ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರುವುದು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಕುತೂಹಲದ ಸಂಗತಿ.

2018ರ ಚುನಾವಣಾ ಕಣವನ್ನು ಗಮನಿಸಿದರೆ ಕಾಂಗ್ರೆಸ್‌ನಿಂದ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ, ಪಕ್ಷೇತರರಾಗಿ ವಿದ್ಯಾಶ್ರೀ ಎಸ್‌., ಬೆಳ್ತಂಗಡಿಯಲ್ಲಿ ಜೆಡಿಎಸ್‌ನಿಂದ ಸುಮತಿ ಹೆಗ್ಡೆ, ಮೂಡುಬಿದಿರೆಯಲ್ಲಿ ಪಕ್ಷೇತರರಾಗಿ ರೀನಾ ಪಿಂಟೊ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂಇಪಿಯಿಂದ ಶಬನಾ ಶೇಕ್ ಸ್ಪರ್ಧಿಸಿದ್ದರೆ, ಉಡುಪಿಯಲ್ಲಿ ಕಾಪು ಕ್ಷೇತ್ರದಿಂದ ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಅನುಪಮಾ ಶೆಣೈ ಸ್ಪರ್ಧಿಸಿದ್ದಾರೆ.

ADVERTISEMENT

ಈ ಬಾರಿ ಬಿಜೆಪಿ ಕರಾವಳಿಯ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ. ಗೆದ್ದ ಅಭ್ಯರ್ಥಿಗಳಿಗೇ ಟಿಕೆಟ್‌ ಎಂಬ ಕಾಂಗ್ರೆಸ್‌ ನೀತಿಯಿಂದಾಗಿ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರು ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕರಾವಳಿಯಲ್ಲಿ ದುರ್ಬಲವಾಗಿರುವ ಜೆಡಿಎಸ್‌ ಬೆಳ್ತಂಗಡಿಯಲ್ಲಿ ಸುಮತಿ ಹೆಗ್ಡೆ ಅವರಿಗೆ ಟಿಕೆಟ್‌ ನೀಡಿತ್ತು. ಆದರೆ ಯಾರೊಬ್ಬರೂ ಗೆಲ್ಲದೇ ಇರುವುದರಿಂದ ಕರಾವಳಿಯಲ್ಲಿ ಜನನಾಯಕಿಯರಾಗಿ ಯಾರೂ ಗುರುತಿಸಿಕೊಂಡಿಲ್ಲ ಎನ್ನಬಹುದು. ಪ್ರಸ್ತುತ ಕರಾವಳಿ ರಾಜಕೀಯದಲ್ಲಿ ಬಂಟರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರೂ, ಅಳಿಯಕಟ್ಟು ಸಂಪ್ರದಾಯದ ಪ್ರಧಾನ ಸಮಯದಾಯವಾದ ಬಂಟ ಸಮುದಾಯದಿಂದ ಮಹಿಳೆಯರು ರಾಜಕೀಯದಲ್ಲಿ ಕಾಣಿಸದೇ ಇರುವುದು ವಿಸ್ಮಯಕಾರಿ ಎನಿಸಿದೆ.

ಕರಾವಳಿಯಿಂದ ಈ ಹಿಂದೆ ಲೀಲಾವತಿ ರೈ, ವಿನ್ನಿ ಫರ್ನಾಂಡಿಸ್‌, ಮನೋರಮಾ ಮಧ್ವರಾಜ್‌, ಎಡ್ಡಿ ಸಲ್ಡಾನಾ, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್‌ ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆದವರು. 1967ರಲ್ಲಿ ವಿನ್ನಿ ಫರ್ನಾಂಡಿಸ್‌ ಅವರು ಕುಂದಾಪುರದಿಂದ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಮತ್ತು ಬಂಟ್ವಾಳದಿಂದ ಲೀಲಾವತಿ ರೈ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಮೊದಲ ಮಹಿಳೆಯರು.

ಹಾಗೆ ನೋಡಿದರೆ 2013ರ  ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯರ ಸಂಖ್ಯೆ ಉತ್ತಮವಾಗಿತ್ತು. ಬೈಂದೂರಿನಿಂದ ಸುರಯ್ಯ ಬಾನು ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದರೆ, ಕಾರ್ಕಳದಲ್ಲಿ ಕೆ.ಪಿ. ಪದ್ಮಾವತಿ ಅವರು ಸ್ವತಂತ್ರರಾಗಿ ಸ್ಪರ್ಧಿಸಿದ್ದರು. ಸುಳ್ಯ ಕ್ಷೇತ್ರದಲ್ಲಿ ಕೆಜೆಪಿಯಿಂದ ಚಂದ್ರಾವತಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ಶಕುಂತಳಾ ಶೆಟ್ಟಿ ಹಾಗೂ ಬೆಳ್ತಂಗಡಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ರಾಜಶ್ರೀ ಹೆಗ್ಡೆ ಸ್ಪರ್ಧಿಸಿದ್ದರು.

ಈ  ಅಂಶವನ್ನು ಗಮನಿಸಿರುವ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು, ಕಾಂಗ್ರೆಸ್‌ ಮಹಿಳೆಯರ ಪ್ರಾತಿನಿಧ್ಯವನ್ನು ಬೆಂಬಲಿಸುತ್ತದೆ ಎನ್ನುತ್ತಾರೆ. ‘ಮಹಿಳಾ ಮೀಸಲಾತಿ ಪರಿಕಲ್ಪನೆಯನ್ನು ರೂಪಿಸಿದ್ದೇ ರಾಜೀವ್‌ ಗಾಂಧಿ ಅವರ ಕಾಲದಲ್ಲಿ. ಆದ್ದರಿಂದಲೇ ಇಂದು ತಕ್ಕಮಟ್ಟಿಗಾದರೂ ಮಹಿಳೆಯರು ಕಾಂಗ್ರೆಸ್‌ನಲ್ಲಿ ಇರುವುದು ಸಾಧ್ಯವಾ
ಗಿದೆ. ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರಬೇಕು ಎನ್ನುವ ಆಶಯದಲ್ಲಿ ಪಕ್ಷಭೇದವಿಲ್ಲ. ಯಾವ ಪಕ್ಷದಲ್ಲಿಯೇ ಆಗಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ಅವರು.

ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಮಂಗಳೂರು ಭೇಟಿ ಸಂದರ್ಭದಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ವೈಯಕ್ತಿಕ ಅಭಿಪ್ರಾಯವೊಂದನ್ನು ಮಂಡಿಸಿದ್ದರು. ‘ಮೀಸಲಾತಿಯು ಪಕ್ಷದೊಳಗೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿಯೇ ಇರಬೇಕು. ಯಾವ ಪಕ್ಷವು ನಿಗದಿತ ಮಹಿಳಾ ಮೀಸಲಾತಿಯನ್ನು ಅನುಸರಿಸುವುದಿಲ್ಲವೋ, ಅಂತಹ ಪಕ್ಷದ ಮಾನ್ಯತೆ ರದ್ದಾಗುವಂತೆ ಚುನಾವಣಾ ಆಯೋಗ ಒಂದು ಸಾಲಿನ ನಿಯಮ ಹೊರಡಿಸಿದರೆ ಸಾಕು. ಅದಕ್ಕಾಗಿ, ಕಾನೂನು, ತಿದ್ದುಪಡಿಗಳ ಅಗತ್ಯವೇ ಇರುವುದಿಲ್ಲ’ಎಂಬ ಅಭಿಪ್ರಾಯ ಅವರದು.

ಹಿಂಜರಿಕೆ ಸಲ್ಲದು

ವ್ಯಾಪಾರ ವಹಿವಾಟಿನಲ್ಲಿ ಛಾತಿ ಉಳ್ಳ ಸಮುದಾಯದ ಮಹಿಳೆಯರು ನಮ್ಮಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರನ್ನು ಚಿನ್ನದ ಪಂಜರದಲ್ಲಿ ಇರಿಸುವಲ್ಲಿ ಪುರುಷವರ್ಗ ಯಶಸ್ವಿಯಾಗಿದೆ. ಆದ್ದರಿಂದ ಹಲವು ಬಾರಿ ರಾಜಕೀಯ ಅವಕಾಶ ಎದುರಾದಾಗಲೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಭೂತಾರಾಧನೆಯ ಸಂದರ್ಭದಲ್ಲಿ ಅನೇಕ ನಿಷೇಧಗಳು ಅವಳ ಸುತ್ತ ಇರುವುದರಿಂದ ಈ ಹಿಂಜರಿಕೆ ಆಕೆಯಲ್ಲಿ ಇರಬಹುದು ಎಂದು ಡಾ.ಇಂದಿರಾ ಹೆಗ್ಗಡೆ ವಿಶ್ಲೇಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.