ADVERTISEMENT

ವಿಮಾನ ನಿಲ್ದಾಣ ಕಾಂಪೌಂಡ್‌ಗೆ ಹಾನಿ

ಮೇ 29ರಂದು ಸುರಿದ ಭಾರಿ ಮಳೆ ಪರಿಣಾಮ; ಗೋಡೆಯಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 7:03 IST
Last Updated 6 ಜೂನ್ 2018, 7:03 IST
ಕಲ್ಲಿನ ಗೋಡೆಯಲ್ಲಿ ಬಿರುಕು ಮೂಡಿರುವುದು.
ಕಲ್ಲಿನ ಗೋಡೆಯಲ್ಲಿ ಬಿರುಕು ಮೂಡಿರುವುದು.   

ಮಂಗಳೂರು: ಮೇ 29ರಂದು ಸುರಿದ ಭಾರಿ ಮಳೆಯ ಪರಿಣಾಮವಾಗಿ ಬಜ್ಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಹಾನಿಯಾಗಿದೆ. ಮಳೆಯ ನೀರು ಭಾರಿ ಪ್ರಮಾಣದಲ್ಲಿ ಹರಿದು ಮಣ್ಣು ಕೊಚ್ಚಿಹೋದ ಪರಿಣಾಮ ಕಲ್ಲಿನ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸರಕು ಸಾಗಣೆ ವಿಮಾನಗಳು, ದೇಶದೊಳಗೆ ಹಾರಾಟ ನಡೆಸುವ ವಿಮಾನಗಳು ಇಳಿಯುವುದು ಮತ್ತು ಹಾರಾಟ ಆರಂಭಿಸುವುದಕ್ಕೆ ವಿಮಾನ ನಿಲ್ದಾಣದ ಹಳೆಯ ರನ್‌ ವೇಯನ್ನು ಬಳಸಲಾಗುತ್ತದೆ. ಈ ರನ್‌ ವೇ ತಲೆಯ ಭಾಗದಲ್ಲೇ ಕಾಂಪೌಂಡ್‌ಗೆ ಹಾನಿಯಾಗಿದೆ. ಕಾಂಪೌಂಡ್‌ಗೆ ಹೊಂದಿ ಕೊಂಡಂತೆ ಬೃಹತ್‌ ಪ್ರಮಾಣದಲ್ಲಿ ಮಣ್ಣು ಕುಸಿದುಬಿದ್ದಿದೆ.

ಕಾಂಪೌಂಡ್‌ನಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳದಲ್ಲಿ ಭೂಕುಸಿತ ಮುಂದುವರಿದಿದೆ. ಮಂಗಳವಾರ ಕೂಡ ಅಲ್ಲಿ ಕೆಲವು ಮರಗಳು ಉರುಳಿಬಿದ್ದಿವೆ. ಇನ್ನಷ್ಟು ಮರಗಳು ಉರುಳಿ ಬೀಳುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ADVERTISEMENT

ಮೇ 29ರಂದು ವಿಮಾನ ನಿಲ್ದಾಣದ ಆವರಣದಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ನೀರು ಏಕಾಏಕಿ ಹೊರಕ್ಕೆ ಹರಿದಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿದೆ. ವಿಮಾನ ನಿಲ್ದಾಣದ ಕೆಳಭಾಗದ ಜನವಸತಿ ಪ್ರದೇಶಕ್ಕೆ ಈ ನೀರು ನುಗ್ಗಿತ್ತು. ಕೆಲವು ಮನೆಗಳಿಗೂ ನೀರು ನುಗ್ಗಿದ್ದು, ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.‌

ನಿಲ್ದಾಣದ ರನ್‌ ವೇಗೆ ಹಾನಿಯಾ ಗಿದ್ದು, ವಿಮಾನಗಳ ಹಾರಾಟ ಸ್ಥಗಿತ ಗೊಂಡಿದೆ ಎಂಬ ಸುದ್ದಿ ವಾಟ್ಸ್‌ ಆ್ಯಪ್‌ ಮೂಲಕ ಮಂಗಳವಾರ ಹರಿದಾಡಿತ್ತು. ಕೆಲವು ಸುದ್ದಿ ವಾಹಿನಿಗಳಲ್ಲೂ ಈ ಸುದ್ದಿ ಪ್ರಸಾರವಾಗಿತ್ತು. ಆದರೆ, ವಿಮಾನ ನಿಲ್ದಾಣ ಪ್ರಾಧಿಕಾರ ಈ ವದಂತಿಯನ್ನು ನಿರಾಕರಿಸಿದೆ.

‘ಭಾರಿ ಮಳೆಯಿಂದ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಹಾನಿಯಾಗಿದೆ. ಆದರೆ, ಯಾವುದೇ ರೀತಿಯಲ್ಲೂ ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟಾಗಿಲ್ಲ. ವಿಮಾನಗಳ ಸಂಚಾ ರ ಸ್ಥಗಿತವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ವಿಮಾನ ಗಳ ಹಾರಾಟ ಎಂದಿನಂತೆ ಮುಂದುವ ರಿದಿದೆ’ ಎಂದು ನಿಲ್ದಾಣದ ನಿರ್ದೇಶಕ ವಿ.ವಿ.ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.